ಮೋದಿ ಬದಲು ದಾದಾ ಈ ದೇಶದ ಪ್ರಧಾನಿಯಾಗಬೇಕಿತ್ತು ಎಂದೆನಿಸಿದ್ದು ಅನೇಕ ಬಾರಿ:

1 min read
lalkrishna adwani and narendra modi saakshatv

ಮೋದಿ ಬದಲು ದಾದಾ ಈ ದೇಶದ ಪ್ರಧಾನಿಯಾಗಬೇಕಿತ್ತು
ಎಂದೆನಿಸಿದ್ದು ಅನೇಕ ಬಾರಿ:
ಬಲಾಢ್ಯ ಕೇಸರಿ ಕೋಟೆ ಕಟ್ಟಿದ ಭಾಜಪಾದ ಭೀಷ್ಮ, ಉಕ್ಕಿನ ಮನುಷ್ಯ ಲಾಲ್‌ಕೃಷ್ಣ
ಆಡ್ವಾಣಿ ಎಂಬ ಹತಭಾಗ್ಯನ ಮಹಾಮೌನವೇ ಈ ದೇಶಕ್ಕೆ ಶಾಪ”

-ವಿಶ್ವಾಸ್‌ ಭಾರದ್ವಾಜ್

lal krishna adwani atal bihari vajapay narendra modi saakshatvಒಂದು ಕಾಲದಲ್ಲಿ ಶಿಷ್ಯನ ಅಭ್ಯದಯಕ್ಕಾಗಿ ಮಿತ್ರನೊಟ್ಟಿಗೆ ಜಗಳವಾಡಿದ್ದ ಗುರುವನ್ನೇ ಶಿಷ್ಯ
ಮತ್ತವನ ಮಿತ್ರ ಮೂಲೆಗುಂಪು ಮಾಡಿಹಾಕಿದರು. ಈಗ ವರ್ಷಕ್ಕೊಮ್ಮೆ ಹ್ಯಾಪಿ ಬರ್ತ್‌ಡೇ ದಿನ ಮಾತ್ರ ಟ್ವಿಟರ್‌ನಲ್ಲಿ ನಾಲ್ಕಕ್ಷರ ಗೀಚಿ ಸಾಧ್ಯ ಆದರೆ ಮನೆಗೆ ಹೋಗಿ ಒಂದು ಬೊಕ್ಕೆ ಕೊಟ್ಟು ಬರುತ್ತಾರೆ ಆ ಶಿಷ್ಯ. ಶಿಷ್ಯನ ಏಳಿಗೆಯನ್ನು ಕಂಡು ಸಂಭ್ರಮಿಸಬೇಕಿದ್ದ ಗುರುವಿನ ಮನಸು ತನ್ನದೇ  ಮನೆಯಲ್ಲಿ ತಾನು ಮೂಲೆಗುಂಪಾಗಿರುವುದನ್ನು ಕಂಡು ಮೌನವಾಗಿ ರೋಧಿಸುತ್ತದೆ. ಯಾರ ಬಗ್ಗೆ ಮಾತಾಡುತ್ತಿದ್ದೇನೆ ಎಂದು ನಿಮಗೆ ಅರ್ಥವಾಗಿರಬಹುದು. ಯೆಸ್‌! ಇದು ಭಾರತೀಯ ಜನತಾ ಪಕ್ಷವೆಂಬ ಅಪ್ಪಟ ಕೇಸರಿ ಕೋಟೆಯನ್ನು ಕಟ್ಟಿದ ಲಾಲ್‌ ಕೃಷ್ಣ ಆಡ್ವಾಣಿಯೆಂಬ ಉಕ್ಕಿನ ಮನುಷ್ಯನೇ ಇಂದಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಅನವರತ ತಲೆ ಕಾಯ್ದ ರಾಜಕೀಯ ಗುರು ಗೋದ್ರಾ ಹತ್ಯಾಕಾಂಡ ಸಂಭವಿಸಿದಾಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯ ತಲೆದಂಡವಾಗಲೇಬೇಕು ಎಂದು ಪಟ್ಟು ಹಿಡಿದ ಅವರ ಆಪ್ತಮಿತ್ರ ಅಟಲ್‌ ಬಿಹಾರಿ ವಾಜಪೇಯಿ. ಅಂದು ಮಿತ್ರನೊಟ್ಟಿಗೆ ಕುದ್ದಾಡಿ ಮೋದಿ ಖುರ್ಚಿ ಉಳಿಸಿ, ನಂತರದ ದಿನಗಳಲ್ಲಿ ರಾಷ್ಟ್ರ ರಾಜಕಾರಣಕ್ಕೆ ಬರಲು ವೇದಿಕೆ ನಿರ್ಮಿಸಿಕೊಟ್ಟವರು ಇದೇ ಆಡ್ವಾಣಿ. ಈ ಕಥೆ ಈಗ ಸಮಸ್ತ ಭಾರತೀಯರಿಗೂ ಗೊತ್ತಿದೆ. ಆದರೆ ಒಂದು ವಾಸ್ತವ ಮಾತ್ರ ಯಾರೂ ಅರ್ಥ ಮಾಡಿಕೊಳ್ಳಲು ಮನಸು
ಮಾಡುತ್ತಿಲ್ಲ.

lal krishna adwani  narendra modi saakshatv೨೦೧೪ರ ಚುನಾವಣೆಯಲ್ಲಿ ಒಂದು ವೇಳೆ ಮೋದಿ ಬದಲು ದಾದಾ ಈ ದೇಶದ
ಪ್ರಧಾನಿಯಾಗಿದ್ದಿದ್ದರೇ ಈ ಏಳೆಂಟು ವರ್ಷ ಇಷ್ಟು ದುರ್ಬರ ದಿನಗಳನ್ನು ಕಾಣಬೇಕಿರಲಿಲ್ಲ. ಕೊನೇ
ಪಕ್ಷ ದಾದಾ ಆಡ್ವಾಣಿ ತಮ್ಮ ಪ್ರಧಾನಿ ಗಾದಿಯನ್ನು ನೀಚ ಬಂಡವಾಳ ಶಾಹಿ ಕಾರ್ಪೊರೇಟ್‌
ವಲಯದ ಕಲ್ಯಾಣಕ್ಕಾಗಿ ಮೀಸಲಿಡುತ್ತಿರಲಿಲ್ಲ. ಆಡ್ವಾಣಿ ದಾದಾ ಕೇವಲ ಮಾತಾಡುತ್ತಿರಲಿಲ್ಲ,
ಮಾಡಿ ತೋರಿಸುವ ಕ್ಷಮತೆ ಅನುಭವದ ಪಕ್ವತೆ ಅವರಿಗಿತ್ತು. ಕೋಟೆ ಕಟ್ಟಿದವರು ದಾದಾ ಸುಲಭವಾಗಿ ಧ್ವಜ ನೆಟ್ಟವರು ಮೋದಿ. ಕೋಟೆ ಕಟ್ಟಿದವನಿಗೆ ಮಾತ್ರ ಅದರ ಶ್ರಮದ ಅರಿವಿರುತ್ತದೆ, ಅವನು ಮಾತ್ರ ಉತ್ತಮ ಪ್ರಭುತ್ವ ನೀಡಬಹುದು; ಸುಲಭವಾಗಿ ದಕ್ಕಿದ ಸಿಂಹಾಸನ ಯಾವತ್ತಿದ್ದರೂ ಅಸಡ್ಡೆಯೇ. ಇಂದು ಮೋದಿ ಎಂಡ್‌ ಕಂಪೆನಿ ದೇಶ ನಡೆಸುತ್ತಿರುವುದು ಅಷ್ಟೇ ಅಸಡ್ಡೆಯಿಂದ. ಆಡ್ವಾಣಿ ಈ ದೇಶದ ಪ್ರಧಾನಿಯಾಗಬೇಕಿದ್ದ ಎಲ್ಲಾ ಅರ್ಹತೆ, ನೈತಿಕತೆ ಮತ್ತು ಘನತೆ ಉಳ್ಳವರಾಗಿದ್ದರು. ಆದರೆ ಅವರಿಗೆ  ತಮ್ಮದೇ ಪಕ್ಷದ ಕುಡಿ, ತಾವೇ ಬೆರಳು ಹಿಡಿದು ರಾಜಕಾರಣದ ಪಡಸಾಲೆಯಲ್ಲಿ ನಡೆಸಿದ ಶಿಷ್ಯ ಮಗ್ಗುಲ ಮುಳ್ಳಾಗುತ್ತಾರೆ ಎನ್ನುವ ಕಿಂಚಿತ್‌ ಕಲ್ಪನೆಯೂ ಇರಲಿಲ್ಲ. ಅದರ ಪರಿಣಾಮ ಕೇವಲ
ಅವರ ಮಾತ್ರವೇ ಅಲ್ಲ; ಪೂರ್ತಿ ದೇಶದ ಮೇಲಾಯಿತು.

ಈಗ ೯೨ ತುಂಬಿದ ಆಡ್ವಾಣಿ ಎಂಬ ಬಿಜೆಪಿಯ ರಣಾಗ್ರಣಿಯನ್ನು ಒಂದು ಕಾಲದಲ್ಲಿ ಹೆಸರಿಡಿದು ಕರೆದು ಮಾತಾಡಿಸುವ ಸಲಿಗೆಯೂ ಯಾರಿಗಿರಲಿಲ್ಲ. ಒಬ್ಬ ವಾಜಪೇಯಿಯವರನ್ನು ಹೊರತುಪಡಿಸಿ lal krishna adwani saakshatvನಮ್ಮ ದಿವಂಗತ ಅನಂತ್‌ ಕುಮಾರ್‌, ಪ್ರಮೋದ್‌ ಮಹಾಜನ್‌ ಸೇರಿದಂತೆ ದಿವಂಗತ ಸುಷ್ಮಾ ಸ್ವರಾಜ್‌, ದಿವಂಗತ ಮನೋಹರ್‌ ಪರಿಕ್ಕರ್‌, ದಿವಂಗತ ಅರುಣ್‌ ಜೈಟ್ಲಿ, ರಾಜನಾಥ್‌ ಸಿಂಗ್‌
ಮುಂತಾದವರಿಂದ ಹಿರಿಯರಾಗಿದ್ದ ಮುರುಳಿ ಮನೋಹರ್‌ ಜೋಶಿ, ಯಶವಂತ್‌ ಸಿನ್ಹಾ, ಜಸ್ವಂತ್‌
ಸಿಂಗ್‌, ಜಾರ್ಜ್‌ ಫರ್ನಾಂಡೀಸ್‌, ವಿಹೆಚ್‌ಪಿ ಅಶೋಕ್‌ ಸಿಂಘಾಲ್‌ ಮುಂತಾದವರೂ ಕೂಡಾ ಅಡ್ವಾಣಿಯವರನ್ನು ದಾದಾ ಎಂದು ಸಂಭೋದಿಸುತ್ತಿದ್ದರು. ಅವತ್ತು ಇದೇ ನರೇಂದ್ರ ಮೋದಿ ಮತ್ತು ಅಮಿತ್‌ ಶಾರಿಗೆ ಅಡ್ವಾಣಿಯವರ ಮನೆಯ ದಿಕ್ಕಿಗೂ ಪ್ರವೇಶವಿರಲಿಲ್ಲ.

ಸದ್ಯ ಕೇಂದ್ರದಲ್ಲಿ ಮತ್ತು ಅರ್ಧ ಭಾರತದಲ್ಲಿ ಆಡಳಿತಾರೂಢವಾಗಿರುವ ಬಿಜೆಪಿಯನ್ನು ಬೂದಿಯಿಂದ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಆಡ್ವಾಣಿ. ವಾಜಪೇಯಿ ಪಕ್ಷದ ಥಿಂಕ್‌ ಟ್ಯಾಂಕ್‌ ಆಗಿದ್ದರೇ, ಆಡ್ವಾಣಿ ಹಾರ್ಡ್‌ ವರ್ಕಿಂಗ್ ಕಾರ್ಮಿಕನಾಗಿದ್ದರು.‌ ೯೨ ವರ್ಷದ ಆಡ್ವಾಣಿಗೆ ಈಗ ರಾಜಕೀಯ ಮರೆವು ಎನ್ನುತ್ತವೆ ರಾಷ್ಟ್ರೀಯ ಮಾಧ್ಯಮಗಳು; ಮಾತಾಡಿಸಿ ನೋಡಿ ತುರ್ತುಪರಿಸ್ಥಿತಿಯ ಕಾಲದಲ್ಲಿ ಇಲ್ಲಿ ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಡ್ವಾಣಿ ಮತ್ತು ವಾಜಪೇಯಿಯವರನ್ನು ಬೆಂಗಳೂರಲ್ಲಿ ಎಲ್ಲಿ ಬಂಧಿಸಿ, ಎಲ್ಲಿ ಸೆರೆಯಲ್ಲಿಟ್ಟಿದ್ದರು. ಆ ಜೈಲಿನ ಕೋಣೆಗಳು ಹೇಗಿದ್ದವು? ಅವತ್ತು ಜೊತೆಯಲ್ಲಿದ್ದ ಸಹ ಖೈದಿಗಳು ಯಾರಿದ್ದರು ಎಂದು ಸ್ಪಷ್ಟವಾಗಿ ಹೇಳಬಲ್ಲರು. ಅವರು ಮಾನಸಿಕ ಜರ್ಜರಗೊಳ್ಳಲು ವಯೋಸಹಜ ಕಾಯಿಲೆಗಳಿಗಿಂತ ಹೆಚ್ಚಾಗಿ ಕಾಡಿದ್ದು ಖಿನ್ನತೆ. ತಾನೇ ಆಸ್ಥೆಯಿಂದ ಸೈಟು ಖರೀದಿಸಿ, ಕಟ್ಟಿದ ಮನೆಯಿಂದ ಹೊರಹಾಕಿದ ವೃದ್ಧ ಅಪ್ಪನ ಸಂಕಟ. ಇದಕ್ಕೆ ಕಾರಣ ಖಂಡಿತಾ ಸಂದರ್ಭಗಳಲ್ಲ, ಪರಿಸ್ಥಿತಿಯಲ್ಲ. ಇವತ್ತು ದೇಶ
ಆಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ತೀರದ ಮಹತ್ವಾಕಾಂಕ್ಷೆ ಮಾತ್ರ.

lal krishna adwani  narendra modi saakshatv೨೦೧೪ರ ಸಂದರ್ಭದಲ್ಲಿ ಅದಾಗಲೇ ಎರಡು ಬಾರಿ ತಮ್ಮ ನೇತೃತ್ವದಲ್ಲಿ ಲೋಕಸಭಾಚುನಾವಣೆಯಲ್ಲೂ ಮುಖಭಂಗ ಎದುರಿಸಿದ ಅಧೈರ್ಯದಲ್ಲಿದ್ದ ಆಡ್ವಾಣಿವರು ರಾಷ್ಟ್ರ ರಾಜಕಾರಣಕ್ಕೆ ಮೋದಿ ಕರೆತರುವ ಪಕ್ಷದ ನಾಯಕರ ಪ್ರಸ್ತಾಪವನ್ನು ಹತಾಶೆ ಬೇಸರದಿಂದ
ಅನುಮೋದಿಸಿದ್ದರು. ಆಗಿನ್ನೂ ಆಡ್ವಾಣಿ ಗಟ್ಟಿಮುಟಾಗಿದ್ದರು; ದೈಹಿಕವಾಗಿ ಮತ್ತು ಮಾನಸಿಕವಾಗಿ. ಅವರಿಗೆ ಒಂದು ಬಾರಿ ಪ್ರಧಾನಿ ಮಾಡಬೇಕಿದ್ದ ಕೃತಜ್ಞತೆಯನ್ನು ಭಾರತೀಯ ಜನತಾ ಪಕ್ಷ ಮತ್ತು
ಸಂಘ ಪರಿವಾರ ಮಾಡಬೇಕಿತ್ತು, ಮಾಡಲು ಸಿದ್ಧವೂ ಇತ್ತೇನೋ. ಆದರೆ ದಿಢೀರ್‌ನೇ ಎಮರ್ಜ್‌ ಆದ ನರೇಂದ್ರ ಮೋದಿ ತನ್ನ ಮೇನಿಯಾವನ್ನು ಬ್ರಾಂಡ್‌ ಮಾಡಿ ಕ್ಲೀನ್‌ ಮ್ಯಾಂಡೇಟ್‌ ಸೃಷ್ಟಿಸಿಕೊಂಡಾಗ ಒಮ್ಮೆಯಾದರೂ ಗುರುಕಾಣಿಕೆ ನೀಡುವ ಯೋಚನೆ ಮಾಡಲೇ ಇಲ್ಲ. ಅವತ್ತು ಮೋದಿ ದೊಡ್ಡ ಮನಸು ಮಾಡಿದ್ದಿದ್ದರೇ ಮೊದಲ ಅರ್ಧ ಅವಧಿಗಾದರೂ ಆಡ್ವಾಣಿಯವರನ್ನು ಪ್ರಧಾನಿ ಮಾಡಬೇಕಿತ್ತು. ನೆನಪಿಸಿಕೊಳ್ಳಿ ಆ ಸಂದರ್ಭದಲ್ಲಿ ಆಡ್ವಾಣಿಯವರ ಮೇಲಿನ ಗೌರವಕ್ಕಾಗಿ ಎನ್‌ಡಿಎ ಜೊತೆ ಗುರುತಿಸಿಕೊಂಡಿದ್ದ ಬಿಹಾರದ ಜೆಡಿಯೂ ನಿತೀಶ್‌, ಶರದ್‌ ಯಾದವ್‌, ತಮಿಳಿನ ಅಮ್ಮ ಜಯಲಲಿತಾ ಬಹಿರಂಗವಾಗಿ ಆಡ್ವಾಣಿ ಪ್ರಧಾನಿಯಾಗಬೇಕು ಎಂದು ಮಾತಾಡಿದ್ದರು. ನಿತೀಶ್‌
ಕುಮಾರ್‌ ಎನ್‌ಡಿಎ ಸಖ್ಯವನ್ನೇ ತೊರೆದಿದ್ದರು. ಅವತ್ತು ಆಡ್ವಾಣಿ ಮೊತ್ತ ಮೊದಲ ಬಾರಿ ಅವಮಾನ ಅನುಭವಿಸಿದರು. ಅದಾದ ನಂತರ ಮತ್ತೆ ರಾಜ್ಯಸಭೆಗೂ ಅವರ ಹೆಸರನ್ನು ಪ್ರಸ್ತಾಪಿಸಿದೇ ಅಮಿತ್‌ ಶಾರನ್ನು ಆಯ್ಕೆ ಮಾಡಲಾಯಿತು. ತೀರಾ ಇತ್ತೀಚೆಗೆ ರಾಮಜನ್ಮಭೂಮಿಯಲ್ಲಿ ಭೂಮಿ ಪೂಜೆಯ ಸಮಯದಲ್ಲಿಯೂ ಆಡ್ವಾಣಿ ಮತ್ತೆ ಅವಮಾನ ಅನುಭವಿಸಿದರು. ೧೯೯೧ರಿಂದ ಸತತ ಆರು ಬಾರಿ ಪ್ರತಿನಿಧಿಸಿದ ಗಾಂಧಿನಗರ ಲೋಕಸಭಾ ಕ್ಷೇತ್ರವನ್ನು ಅವರಿಂದ ಕಿತ್ತು ಅಮಿತ್‌ಶಾಗೆ ನೀಡಲಾಗಿದೆ. ಹೀಗೆ ಅವಮಾನಗಳ ಸಾಲು ಸಾಲು ಅವರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿಸಿತು. ರಾಮಮಂದಿರ ರಥ ಯಾತ್ರೆಯ ಸಮಯದಲ್ಲಿ ಬಿಹಾರದಲ್ಲಿ ಇದೇ ನಿತೀಶ್‌ ಕುಮಾರ್‌ ಸರ್ಕಾರ ಆಡ್ವಾಣಿಯವರನ್ನು ಬಂಧಿಸಿತ್ತು. ಬಾಬ್ರಿ ಮಸೀದಿ lal krishna adwani atal bihari vajapay narendra modi saakshatvಧ್ವಂಸ ಪ್ರಕರಣದಲ್ಲಿ ಆಡ್ವಾಣಿ, ಮುರುಳಿ ಮನೋಹರ್‌ ಜೋಶಿ, ಉಮಾ ಭಾರತಿ, ಅಶೋಕ್‌
ಸಿಂಘಾಲ್‌ ಕ್ರಿಮಿನಲ್‌ ಕೇಸ್‌ ಹಾಕಿಸಿಕೊಂಡರು. ಆಡ್ವಾಣಿಯವರ ಮೇಲೆ ವಿಚಾರಣೆ ಇನ್ನೂ
ನಡೆಯುತ್ತಲೇ ಇದೆ. ರಾಮಮಂದಿರ ಅಜೆಂಡಾದಲ್ಲಿ ಸೇರಿಸಿಕೊಳ್ಳದೇ ಇದ್ದಿದ್ದರೇ ಇವತ್ತು
ಭಾರತೀಯ ಜನತಾ ಪಾರ್ಟಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಿತ್ತೇ?

ಇಲ್ಲೊಂದು ಸೂಕ್ಷ್ಮ ಸಂಗತಿಯಿದೆ ನೀವ್ಯಾರಾದರೂ ಗಮನಿಸಿದ್ದೀರೋ ಇಲ್ಲವೋ, ಬಿಜೆಪಿ
ಮಾಡಿಕೊಂಡ ೭೫ ವರ್ಷದ ವಯೋಮಿತಿ ನಿಯಮದ ಮೊದಲ ಬಲಿಪಶು ಲಾಲ್‌ ಕೃಷ್ಣ ಆಡ್ವಾಣಿ. ಆದರೆ ಈ ವಯೋಮಿತಿ ನಿಯಮವನ್ನು ತಾನೇ ಮೀರಿದ ಹೈಕಮಾಂಡ್‌ ಮೊನ್ನೆ ಕೇರಳದ ಚುನಾವಣೆಯಲ್ಲಿ ೮೮ರ ಮೆಟ್ರೋ ಮ್ಯಾನ್‌ ಶ್ರೀಧರನ್‌ಗೆ ಚುನಾವಣಾ ಸಾರಥ್ಯ ವಹಿಸಿತು. ಅಲ್ಲಿಗೆ ಮೋದಿ ಎಂಡ್‌ ಟೀಂ ಈ ವಯೋಮಿತಿ ನಿಯಮ ಮಾಡಿದ್ದು ಯಾಕಾಗಿ ಅನ್ನುವುದನ್ನು ನೀವೇ ಅರ್ಥ ಮಾಡಿಕೊಳ್ಳಿ. ಆಡ್ವಾಣಿ, ೧೯೮೦ರಲ್ಲಿ ಹುಟ್ಟಿದ ಭಾರತೀಯ ಜನತಾ ಪಕ್ಷದ ಮೂವರು ಸಂಸ್ಥಾಪಕರಲ್ಲಿ ಒಬ್ಬರು.
ತಮ್ಮ ಅನಾರೋಗ್ಯದ ಕಾರಣ ೨೦೦೯ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಚುನಾವಣಾ ಕಣದಿಂದ ಹೊರಗುಳಿದರೆ, ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಜನಮತದಿಂದ ಆಯ್ಕೆಯಾಗಿದ್ದ ಆಡ್ವಾಣಿ ಮತ್ತು ಮುರುಳಿ ಮನೋಹರ್‌ ಜೋಶಿ ಇಬ್ಬರೂ ಸಂಸತ್ತಿನಲ್ಲಿ ಸಕ್ರಿಯವಾಗಿ ಹಾಜರಾಗುತ್ತಿದ್ದರು.
ಆಗಸ್ಟ್‌ ೧೬, ೨೦೧೮ರಂದು ಅಟಲ್‌ ದೇಹಾಂತ್ಯವಾದಾಗ ಆಡ್ವಾಣಿ ಕಾಣಿಸಿಕೊಂಡಿದ್ದ ರೀತಿ ಅವರು ಪಕ್ಷದಲ್ಲಿ ಅದೆಷ್ಟು ಅನಾಥ ಭಾವ ಎದುರಿಸುತ್ತಿದ್ದಾರೆ ಅನ್ನುವುದನ್ನು ಸಾಕ್ಷೀಕರಿಸುತ್ತಿತ್ತು. ಆನಂತರ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಆಡ್ವಾಣಿಯ ಗಾಂಧಿನಗರ ಕ್ಷೇತ್ರ ಮತ್ತು ಮುರುಳಿ ಮನೋಹರ್‌ ಜೋಶಿಯ ಉತ್ತರ ಕಾನ್ಪುರ ಕ್ಷೇತ್ರ ಎರಡೂ ಮೋದಿ ಕೈವಶವಾದವು. ೨೦೧೪ರಲ್ಲಿ ಮೋದಿ ಪ್ರಧಾನಿಯಾಗುತ್ತಲೇ ಒಂದೇ ತಿಂಗಳ ಅವಧಿಯಲ್ಲಿ ಅಮಿತ್‌ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು. ಆಗ ಚಾಲ್ತಿಗೆ ಬಂದಿದ್ದೇ ಬಿಜೆಪಿಯ ಹಿರಿಯರ ಸಲಹಾ ಮಂಡಳಿ ಅಥವಾ ಮಾರ್ಗದರ್ಶಕ್‌ ಮಂಡಲ್‌. ಬಿಜೆಪಿಯ ಭೀಷ್ಮ ಲಾಲ್‌ ಕೃಷ್ಣ ಆಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿ ಈ ಮಾರ್ಗದರ್ಶನ ಮಂಡಳಿಯ ಭಾಗವಾಗಲಿದ್ದಾರೆ ಎಂದು ಸನ್ಮಾನ್ಯರು
ಘೋಷಣೆ ಮಾಡಿದ ಕೆಲವೇ ಕಾಲದಲ್ಲೇ ಆಡ್ವಾಣಿ ತಮ್ಮ ರಾಜಕೀಯ ನಿವೃತ್ತಿ ಘೊಷಿಸಿದರು.
ಅವರಿಗೆ ಅದಾಗಲೇ ಮುಂದಾಗಲಿರುವ ವಿದ್ಯಮಾನಗಳ ಅರಿವಾಗಿತ್ತು. ಅಲ್ಲಿಂದ ಬಿಜೆಪಿಯ ಉಕ್ಕಿನ ಮನುಷ್ಯ ಮಹಾಮೌನಕ್ಕೆ ಶರಣಾಗಿಬಿಟ್ಟರು; ಬಿಜೆಪಿಯ ಎರಡನೇ ಮತ್ತು ಮೂರನೇ ಜನರೇಷನ್‌ ನಾಯಕರು ಮುಲಾಜಿಲ್ಲದೇ ದಾದಾರನ್ನು ನೇಪಥ್ಯಕ್ಕೆ ಸರಿಸಿಬಿಟ್ಟರು. ಈ ಮಾರ್ಗದರ್ಶಕ್‌ ಮಂಡಳಿ ಪರಿಷತ್ತು ಅಂತೇನೋ ಮಾಡಿದೆಯಲ್ಲ ಅದರ ಒಂದೇ ಒಂದು ಸಭೆಯೂ ನಡೆಯಲಿಲ್ಲ.

ಆಡ್ವಾಣಿ-ವಾಜಪೇಯಿ ರಾಜಕೀಯ ಯುಗವನ್ನು ಗೌರವಾನ್ವಿತ ಘನತೆಬದ್ಧ ಶಿಸ್ತುಬದ್ಧ ಕಾಲ
ಎನ್ನತ್ತದೆ ದೆಹಲಿಯ ಹಿರಿಯ ಪತ್ರಕರ್ತರ ವಲಯ. ಬಹಳಷ್ಟು ಎಡಪಂಥೀಯ ವಿಚಾರಧಾರೆಯ ನ್ಯಾಷನಲ್‌ ಜರ್ನಲಿಸ್ಟ್‌ಗಳು ಆಡ್ವಾಣಿಯವರನ್ನು ಗೌರವಿಸಿದಷ್ಟು ಮೋದಿಯವರನ್ನು ಗೌರವಿಸಲಾರರು. ಯಾಕಂದರೆ ಬಲಪಂಥೀಯ ವಿಚಾರಧಾರೆಯ ಮೂಲ ವಾಸ್ತುಶಿಲ್ಪಿ ಮತ್ತು ಇಂಜಿನಿಯರ್ ಅಡ್ವಾಣಿ, ವಾಜಪೇಯಿಯವರಂತೆಯೇ ಅಜಾತಶತ್ರುವಾಗಿದ್ದರು. ರಾಮಜನ್ಮಭೂಮಿ ರಥಯಾತ್ರೆಯ ಕಾಲಘಟ್ಟದ ನಂತರ ಬಾಬ್ರಿ ಮಸೀದಿ ದ್ವಂಸದ ಆಪಾದನೆಯನ್ನೂ ಮೀರಿ ಸೆಕ್ಯುಲರ್‌
lal krishna adwani atal bihari vajapay narendra modi saakshatvಧೋರಣೆ ತಾಳಿದ್ದರು. ಈ ದೇಶದ ಪ್ರಧಾನಿಯಾಗಬೇಕಿದ್ದರೆ ಅಂತದ್ದೊಂದು ನಿಲುವು ಖಂಡಿತಾ ಬೇಕು
ಅನ್ನುವ ವಾಜಪೇಯಿ ನಿಲುವೇ ಆಡ್ವಾಣಿಯವರದ್ದೂ ಆಗಿತ್ತು. ತಮ್ಮ ಮೇಲಿದ್ದ ಕೋಮುವಾದಿ,
ಅಲ್ಪಸಂಖ್ಯಾತರ ಶತ್ರು ಅನ್ನುವ ಇಮೇಜಿನಿಂದ ಹೊರಬರಲು ೨೦೦೫ರಲ್ಲಿ ಪಾಕಿಸ್ತಾನಕ್ಕೆ ಹೋಗಿ
ಜಿನ್ನಾ ಸೆಕ್ಯೂಲರ್‌ ವ್ಯಕ್ತಿ ಎಂದು ಹೇಳಿಕೆ ನೀಡಿದರು. ಆದರೆ ಅದೇ ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಗಿ ಹೋಯಿತು. ಪಕ್ಷದೊಳಗಿನ ಕೆಲವರಿಗೆ ಆಡ್ವಾಣಿ ಎರಾ ಮುಗಿಸಲು ಇದೊಂದು ಪ್ರಬಲ
ಅಸ್ತ್ರವಾಯಿತು. ೨೦೦೯ರಲ್ಲಿ ಲೋಕಸಭೆಯಲ್ಲಿ ಆಡ್ವಾಣಿ ಜಾಗದಲ್ಲಿ ವಿರೋಧ ಪಕ್ಷದ
ನಾಯಕಿಯಾಗಿ ಸುಷ್ಮಾ ಸ್ವರಾಜ್‌ರನ್ನು ಪ್ರತಿಷ್ಟಾಪಿಸಲಾಯಿತು.

1984ರ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ ಗಳಿಸಿಕೊಂಡಿದ್ದ ಭಾರತೀಯ ಜನತಾ ಪಕ್ಷವನ್ನು ಮೂಲದಿಂದ ಬಲಪಡಿಸಿ 1989ರಲ್ಲಿ 85 ಸ್ಥಾನಗಳಿಗೆ ಏರುವಂತೆ ಮಾಡಿದ್ದು ದಾದಾ ಆಡ್ವಾಣಿ.
1986ರಿಂದ 1991ರವರೆಗೆ ಪಕ್ಷದ ಅಧ್ಯಕ್ಷರಾಗಿ ಅವರ ಮೊದಲ ಅವಧಿಯಲ್ಲಿ ಬಿಜೆಪಿ ಬಹುಸಂಖ್ಯಾತ ಹಿಂದೂ ಮತದಾರರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದು ಆಡ್ವಾಣಿ. ಸೆಪ್ಟೆಂಬರ್ 20, 1990ರಂದು, ಗುಜರಾತಿನ ಸೋಮನಾಥ ದೇವಾಲಯದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ರಾಮಜನ್ಮಭೂಮಿ ರಥಯಾತ್ರೆ ಸಂಕಲ್ಪವೇ ಬಿಜಪಿಯ ತಳಪಾಯವಾಯಿತು. ಅದರ ಪರಿಣಾಮವಾಗಿ ೧೯೯೨ರಲ್ಲಿ ಬಾಬ್ರಿ ಮಸೀದಿ ದ್ವಂಸವಾದಾಗ ಅದರ ಅಷ್ಟೂ ಆಪಾದನೆ ಆಡ್ವಾಣಿ ಭುಜವೇರಿತು.

lal krishna adwani atal bihari vajapay narendra modi saakshatvಇತಿಹಾಸ ಬಾಬ್ರಿ ಮಸೀದಿ ದ್ವಂಸವನ್ನು ಆಡ್ವಾಣಿ ತಲೆಗೆ ಕಟ್ಟಿತು. ಪರಮ ಮಿತ್ರ
ವಾಜಪೇಯಿಯವರನ್ನು ಮೂರು ಬಾರಿ ಪ್ರಧಾನಿ ಸ್ಥಾನದಲ್ಲಿ ಕೂರಿಸಿದ ಆಡ್ವಾಣಿ ಕೇವಲ ವಿಷದ
ಕಹಿಯನ್ನು ಮಾತ್ರವೇ ಉಂಡರು. ೨೦೦೨ರಲ್ಲಿ ಸಂಭವಿಸಿದ ಗುಜರಾತ್‌ ಕೋಮುಗಲಭೆಯ
ಹೊಣೆಯನ್ನು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಹೊರಬೇಕು ಎಂದು ಗೋವಾದಲ್ಲಿ
ನಡೆದಿದ್ದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ವಾಜಪೇಯಿ ಗುಡುಗಿದ್ದಾಗ ಮೋದಿ ಪರ ನಿಂತು ಅವರ ಮುಖ್ಯಮಂತ್ರಿ ಗಾಧಿ ಉಳಿಸಿದ್ದು ಆಡ್ವಾಣಿ. ಅವತ್ತು ಅವರೇನಾದರೂ ಮೋದಿಯ ಪರ ನಿಲ್ಲದೇ ಇದ್ದಿದ್ದರೇ, ಮೋದಿ ಮೂರು ಬಾರಿ ಗುಜರಾತ್‌ ಮುಖ್ಯಮಂತ್ರಿಯಾಗಿ ಆಳ್ವಿಕೆ ಮಾಡುತ್ತಲೂ ಇರಲಿಲ್ಲ; ೨೦೧೪ರಲ್ಲಿ ಪ್ರಧಾನಿಯಾಗುತ್ತಲೂ ಇರಲಿಲ್ಲ. ಇತಿಹಾಸಕ್ಕೆ ಕೃತಜ್ಞತೆಯ ಲವಲೇಷವಿಲ್ಲ.

ವಾಜಪೇಯಿ ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯಾಗಿದ್ದ ಆಡ್ವಾಣಿ 2004ರ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆಸಿದ್ದಾಗ ಕೇವಲ 138 ಸ್ಥಾನಗಳ ಪಡೆದರೇ, ೨೦೦೯ರ ಚುನಾವಣಾ ನೇತೃತ್ವ ವಹಿಸಿಕೊಂಡಾಗ ೧೧೬ ಸ್ಥಾನಗಳಿಗೆ ಕುಸಿದಿತ್ತು. ಎರಡನೇ ಬಾರಿ ೨೦೬ ಸ್ಥಾನಗಳೊಂದಿಗೆ ಕಾಂಗ್ರೆಸ್‌ ಕೇಂದ್ರದ ಅಧಿಕಾರ ವಹಿಸಿಕೊಂಡಿತ್ತು; ಅತ್ತ ಆಡ್ವಾಣಿ ರಾಜಕೀಯ ಬದುಕಿನ ಯುಗಾಂತ್ಯಕ್ಕೆ ಮೊದಲ ಮುನ್ನುಡಿ ಬರೆಯಲಾಗಿತ್ತು. ೨೦೧೩ರಲ್ಲಿ ಗೋವಾದಲ್ಲಿ ಮತ್ತೆ ರಾಷ್ಟ್ರೀಯ ಕಾರ್ಯಕಾರಿಣೀ ಸಭೆ ನಡೆಯಿತಲ್ಲ ಆ ಸಭೆಯಲ್ಲಿ ಆಡ್ವಾಣಿ ಮೊದಲ ಬಾರಿಗೆ ಗೈರು ಹಾಜರಾಗಿದ್ದರು. ಆ ಸಭೆಯಲ್ಲಿಯೇ ಮುಂದಿನ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರ ಹೆಸರನ್ನು ಅಂತಿಮಗೊಳಿಸುವ ನಿರ್ಧಾರ ಮಾಡಲಾಯಿತು. ಉದ್ದೇಶಪೂರ್ವಕವಾಗಿ ಆಡ್ವಾಣಿ ಗೈರುಹಾಜರಾಗುವ
ಮೂಲಕ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ಬಗೆದಿದ್ದವು. ಆದರೆ ನಂತರ ಇದಕ್ಕೆ ಆಡ್ವಾಣಿ ಸ್ಪಷ್ಟೀಕರಣ ಸಹ ಕೊಟ್ಟಿದ್ದರು.

ಇಲ್ಲೊಂದು ಇಂಟರೆಸ್ಟಿಂಗ್‌ ಫ್ಯಾಕ್ಟ್‌ ಹೇಳಬೇಕನ್ನಿಸುತ್ತದೆ; ೨೦೦೪ರ ಲೋಕಸಭಾ
ಚುನಾವಣೆಯಲ್ಲಿ ಆಡ್ವಾಣಿ ನೇತೃತ್ವದ ಬಿಜೆಪಿಯ ಪ್ರಣಾಳಿಕೆಯ ಟೈಟಲ್‌ ಇಂಡಿಯಾ ಶೈನಿಂಗ್  ಆದರೆ 2012ರ ಆಸುಪಾಸಿನ ದಿನಗಳಲ್ಲಿ ಅಮಿತಾಬ್‌ ಬಚ್ಚನ್‌ ರನ್ನು ಬ್ರಾಂಡ್‌ ಅಂಬಾಸಡರ್‌ ಮಾಡಿ ಗುಜರಾತ್‌ ಟೂರಿಸಂ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇಟ್ಟ ಹೆಸರು ಗುಜರಾತ್‌ ಶೈನಿಂಗ್.‌ ನಂತರದ ದಿನಗಳಲ್ಲಿ ಅದೇ ಗುಜರಾತ್‌ ಮಾಡೆಲ್‌ ಆಗಿ ಬದಲಾಯಿತು.
ಅವತ್ತು ಒಟ್ಟಾರೆ ಟೂರಿಸಂ ಡೆವಲಪ್ಮೆಂಟ್ ಪ್ರಾಜೆಕ್ಟ್‌ ಬ್ಲೂ ಪ್ರಿಂಟ್‌ ತಯಾರಿಸಿದವ ಚುನಾವಣಾ ಚಾಣಾಕ್ಷ ಪ್ರಶಾಂತ್‌ ಕಿಶೋರ್.‌ ೨೦೧೪ರ ಚುನಾವಣೆಯಲ್ಲಿ ಮೋದಿಯ ಪಬ್ಲಿಕ್‌ ರಿಲೇಷನ್‌ ಕಾರ್ಯಕ್ರಮಗಳಿಗೆ ಪ್ರಶಾಂತ್‌ ಕಿಶೋರ್‌ ಬಳಸಿಕೊಂಡಿದ್ದು ಗುಜರಾತ್‌ ಶೈನಿಂಗ್‌, ಗುಜರಾತ್‌ ಮಾಡೆಲ್‌, ಅಬ್‌ ಕಿ ಬಾರ್‌ ಮೋದಿ ಸರ್ಕಾರ್‌, ಅಚ್ಚೇ ದಿನ್‌, ವಗೈರೆ ವಗೈರೆ. ಗುಜರಾತ್‌ ಶೈನಿಂಗ್‌ ಮುಂದೆ ಆಡ್ವಾಣಿಯ ಇಂಡಿಯಾ ಶೈನಿಂಗ್‌ ಮಸುಕಾಗಿಹೋಯಿತು.

ಇಷ್ಟೆಲ್ಲಾ ಬರೆದ ನಂತರ ನಾವು ಒಂದು ಬಾರಿ ವಾಟ್‌ ಇಫ್‌ ಎಂದು ಕಲ್ಪಿಸಿಕೊಳ್ಳೋಣ. ಒಂದು ವೇಳೆ ಮೋದಿ ಜಾಗದಲ್ಲಿ ಆಡ್ವಾಣಿ ಪ್ರಧಾನಿಯಾಗಿದ್ದರೇ ಏನಾಗಿರುತ್ತಿತ್ತು? ಖಂಡಿತಾ ದೇಶ ಆರ್ಥಿಕವಾಗಿ, ಸಮುದಾಯಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಔದ್ಯೋಗಿಕವಾಗಿ, ಇಷ್ಟು
lal krishna adwani atal bihari vajapay narendra modi saakshatvಕೆಳಗಿಳಿಯುತ್ತಿರಲಿಲ್ಲ. ಮುಖ್ಯವಾಗಿ ಈ ದೇಶದ ಉದ್ಯಮಗಳು ಚೇತರಿಸಿಕೊಳ್ಳಲಾಗದ ಪೆಟ್ಟು
ತಿನ್ನುತ್ತಿರಲಿಲ್ಲ. ಡಿ ಮಾನಿಟೈಸೇಷನ್‌ ಅನ್ನುವ ಪರಮ ಮೂರ್ಖ ಯೋಜನೆಯ
ಆಘಾತವಿರುತ್ತಿರಲಿಲ್ಲ. ಜಿಎಸ್‌ಟಿ ಎನ್ನುವ ತಲೆಬುಡವಿಲ್ಲದ ತೆರಿಗೆ ಹೇರಿಕೆಯಾಗುತ್ತಿರಲಿಲ್ಲ.
ಅವೈಜ್ಞಾನಿಕವಾಗಿ ತೈಲಬೆಲೆ ಹೆಚ್ಚಳವಾಗುತ್ತಿರಲಿಲ್ಲ. ಗ್ಯಾಸ್‌ ಸಬ್ಸಿಡಿ ಮಧ್ಯಮವರ್ಗದ ಬ್ಯಾಂಕ್‌
ಖಾತೆ ತಪ್ಪುತ್ತಿರಲಿಲ್ಲ. ರಿಸರ್ವ್‌ ಬ್ಯಾಂಕಿನ ಆಪತ್‌ಕಾಲದ ನಿಧಿ ದೋಚುವ ಕೆಲಸವಾಗುತ್ತಿರಲಿಲ್ಲ.
ಐಟಿ-ಇಡಿ, ಸಿಬಿಐ, ಚುನಾವಣಾ ಆಯೋಗ, ಮುಂತಾದ ಅಟಾನಮಸ್‌ ಬಾಡಿಗಳನ್ನು ಕೇಂದ್ರ
ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ರಾಜ್ಯಗಳಲ್ಲಿ ಆಪರೇಷನ್‌ ಕಮಲ ಅನ್ನುವ
ಅವಿವೇಕದ ಮುಖಾಂತರ ಶಾಸಕರ ಕುದುರೆ ವ್ಯಾಪಾರ ಆಗುತ್ತಿರಲಿಲ್ಲ. ಚುನಾವಣಾ ಅಕ್ರಮಗಳು ನಡೆಯುತ್ತಿರಲಿಲ್ಲ. ಹಸಿವಿನ ಬಡತನದ ನಿರುದ್ಯೋಗದ ಸೂಚ್ಯಂಕ ಏರುತ್ತಿರಲಿಲ್ಲ. ದೇಶದ ೬ ಲಕ್ಷ ಕೋಟಿ ಮೌಲ್ಯದ ಆಸ್ತಿಗಳ ಖಾಸಗೀಕರಣವಾಗುತ್ತಿರಲಿಲ್ಲ. ರೈತರ ಸರಣಿ ಸಾವುಗಳು, ಹೋರಾಟ ಪ್ರತಿಭಟನೆಗಳಾಗುತ್ತಿರಲಿಲ್ಲ. ಬ್ಯಾಂಕುಗಳು ಕಾರ್ಪೊರೇಟ್‌ ಸಾಲವನ್ನು ಮನ್ನಾ ಮಾಡುತ್ತಿರಲಿಲ್ಲ.
ಸಂಪನ್ಮೂಲವಾಗಬೇಕಿದ್ದ ಯುವಸಮೂಹ ಸಾಮೂಹಿಕ ಸನ್ನಿಯಲ್ಲಿ ತೇಲುತ್ತಿರಲಿಲ್ಲ. ಪಿಆರ್‌,
ಜಾಹಿರಾತು ಮತ್ತು ಪ್ರಚಾರಕ್ಕಾಗಿ ಅನಗತ್ಯ ನಮ್ಮ ತೆರಿಗೆ ಹಣ ಪೋಲಾಗುತ್ತಿರಲಿಲ್ಲ. ಮುಖ್ಯವಾಗಿ ಅಂಬಾನಿ ಮತ್ತು ಅದಾನಿಗಳೆಂಬ ದುಡ್ಡಿನ ಧಣಿಗಳು ಈ ಮಟ್ಟದ ಸಂಪತ್ತು ಕೂಡಿಡುತ್ತಿರಲಿಲ್ಲ.

ಈ ದೇಶ ಒಬ್ಬ ಸಾಧಾರಣ ಪ್ರಧಾನಿಯನ್ನು ಕಂಡಿರುತ್ತಿತ್ತು. ಈ ಅಸಾಮಾನ್ಯ ವಿಶ್ವಗುರು
ಪ್ರಧಾನಿಯಾಗಿದ್ದಕ್ಕೆ ತಾನೇ ದೇಶದ ಸಮಸ್ತ ನಾಗರೀಕರು ಇಂದು ಬದುಕೇ ಭಾರ ಭಾರ
ಅನ್ನುತ್ತಿರುವುದು. ಉಳಿದದ್ದೇನೇ ಇರಲಿ, ಮೋದಿ ಬದಲು ದಾದಾ ಪ್ರಧಾನಿಯಾಗಬೇಕಿತ್ತು ಎಂದು ಈ ಏಳೆಂಟು ವರ್ಷಗಳಲ್ಲಿ ನನಗೆ ಅನೇಕ ಬಾರಿ ಅನ್ನಿಸಿದೆ, ಇದೇ ಅಭಿಪ್ರಾಯ ಈಗೀಗ ಬಿಜೆಪಿಯ ಹಾರ್ಡ್‌ಕೋರ್‌ ಕಾರ್ಯಕರ್ತರಿಂದಲೂ ಕೇಳಿ ಬರತೊಡಗಿವೆ. ಮೊನ್ನೆ ೮ ನವೆಂಬರ್‌ ಆಡ್ವಾಣಿ ಜನ್ಮದಿನ. ಹಾಗಾಗಿ ಇಷ್ಟು ಬರೆಯಬೇಕಾಗಿತ್ತು. ಕೊನೆಯದಾಗಿ ಹೇಳಬೇಕಾಗಿರುವ ಒಂದೇ ಮಾತೆಂದರೆ

ನಿಮ್ಮ ಮೌನ ದೇಶಕ್ಕೆ ದುಬಾರಿಯಾಯಿತು ದಾದಾ!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd