ರಾಜ್ಯ ರಾಜಕಾರಣದಲ್ಲಿ ಹಾಗೂ ದೇಶದ ರಾಜಕೀಯದಲ್ಲೂ ಭಾರಿ ಬದಲಾವಣೆ ಸಂಭವಿಸಲಿದೆ ಎಂಬ ಭವಿಷ್ಯವಾಣಿ ಮೂಲಕ ಈಗಾಗಲೇ ಚರ್ಚೆಗೆ ಬಂದಿದ್ದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಇದೀಗ ಮತ್ತೊಂದು ಸ್ಪೋಟಕ ಭವಿಷ್ಯವಾಣಿಯಿಂದ ಸುದ್ದಿಗೆ ಬಂದಿದ್ದಾರೆ.
ಅರಸನ ಅರಮನೆಗೆ ಕಾರ್ಮೋಡ ಕವಿದೀತು:
ಶ್ರೀಗಳು ಇಂದು ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಅರಸನ ಅರಮನೆಗೆ ಕಾರ್ಮೋಡ ಕವಿದೀತು, ಜಗತ್ತೇ ತಿರುಗಿ ನೋಡುವಂತಹ ಆಘಾತ ಭಾರತಕ್ಕಾಗಲಿದೆ ಎಂದು ಹೇಳಿದ್ದು, ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರಿಂದ ದೇಶದ ಪ್ರಮುಖ ನಾಯಕ ಸ್ಥಾನದಲ್ಲಿರುವವರಿಗೆ ಅಪಾಯ ಕಾದಿದೆ ಎಂಬ ಸಂದೇಶ ಪಸರಿಸಿದೆ.
ಧ್ಯಾನ ಕೇಂದ್ರಕ್ಕೆ ಭೇಟಿ:
ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ನಮನ್ ಫೌಂಡೇಶನ್ ನ ನೂತನ ಧ್ಯಾನ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ಕೋಡಿ ಶ್ರೀಗಳು, ಕೇಂದ್ರ ಹಾಗೂ ರಾಜ್ಯದ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಬಹುದು. ಈಗಲೇ ಪರಿಹಾರ ಕಂಡುಕೊಳ್ಳುವುದು ಉತ್ತಮ. ಇಲ್ಲವಾದರೆ ಸಮಸ್ಯೆಗಳು ಎದುರಾಗುವುದು ಬಹುತೇಕ ಖಚಿತ ಎಂದು ಶ್ರೀಗಳು ಹೇಳಿದರು.
ಯುಗಾದಿ ಮತ್ತು ಸಂಕ್ರಾಂತಿಯ ಮುನ್ಸೂಚನೆ ಫಲಗಳು:
ಸಾಮಾನ್ಯವಾಗಿ ನಾವು ಯುಗಾದಿ ಹಾಗೂ ಸಂಕ್ರಾಂತಿಯ ಸಮಯದಲ್ಲಿ ಭವಿಷ್ಯವಾಣಿ ಮಾಡುತ್ತೇವೆ. ಯುಗಾದಿಯಲ್ಲಿ ಮಳೆ-ಬೆಳೆ ಮುಂತಾದವುಗಳ ಬಗ್ಗೆ ಹೇಳುತ್ತೇವೆ. ಸಂಕ್ರಾಂತಿಯ ವೇಳೆಯಲ್ಲಿ ಆಡಳಿತ ಹಾಗೂ ರಾಜಕೀಯದಲ್ಲಿ ಬದಲಾವಣೆಗಳ ಬಗ್ಗೆ ಹೇಳಲಾಗುತ್ತದೆ. ಈ ಬಾರಿ ಸಂಕ್ರಾಂತಿವರೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಆಮೇಲೆ ದೇಶದ ರಾಜಕೀಯದಲ್ಲಿ ಭಾರೀ ಬದಲಾವಣೆಗಳು ಸಂಭವಿಸುತ್ತವೆ. ಆಮೇಲೆ, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೋಡಿ ಶ್ರೀಗಳು ಹೇಳಿದರು.
ರಾಜಕೀಯ ವಲಯದಲ್ಲಿ ಚರ್ಚೆ:
ಈ ಭವಿಷ್ಯವಾಣಿ ರಾಜ್ಯ ರಾಜಕೀಯದೊಳಗೆ ಮತ್ತು ರಾಷ್ಟ್ರ ರಾಜಕೀಯದಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿದೆ.








