‘ಒಬ್ಬ ಹಿರಿಯ ನಟನಿಗೆ ಹೀಗೇನಾ ಮರ್ಯಾದೆ ಕೊಡೋದು…?
ಬೆಂಗಳೂರು : ‘ಜಗ್ಗೇಶ್ ಅಂದರೆ ನೀವೇ ತಾನೆ.. ಮತ್ತೊಬ್ಬ ಜಗ್ಗೇಶ್ ಇದ್ದಾರಾ..’ ಇದು 40ಕ್ಕೂ ಹೆಚ್ಚು ವರ್ಷ ಕಲಾಸೇವೆ ಮಾಡುತ್ತಾ ಬಂದಿರುವ ನವರಸನಾಯಕ ಜಗ್ಗೇಶ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ತರಾಟೆ ತೆಗೆದುಕೊಂಡ ಪರಿ. ಇದಷ್ಟೆ ಅಲ್ಲಾ, ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದ ರಾಬರ್ಟ್ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರಿಗೆ ಮಾತನಾಡಲು ಅವಕಾಶ ಕೊಡದೆ ಎಗರಾಡಿದ್ದಾರೆ.
ಏನಿದು ಘಟನೆ..?
ದರ್ಶನ್ ಅಭಿಮಾನಿಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ ಅನ್ನೋ ಆಡಿಯೋ ಕ್ಲಿಪ್ ವಿವಾದ ಫೆಬ್ರವರಿಯ ಚಳಿ, ಬೆಲೆ ಏರಿಕೆ ಮಧ್ಯೆಯೂ ಭಾರಿ ಸದ್ದು ಮಾಡುತ್ತಿದೆ. ಈ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಮರ ಸಾರಿದ್ದಾರೆ. ಸಿಕ್ಕ ಸಿಕ್ಕ ಕಡೆಯೆಲ್ಲಾ ನವರಸನಾಯಕನ ವಿರುದ್ಧ ಕೆಂಡಕಾರುತ್ತಿದ್ದಾರೆ. ಇಂದು ಇದು ಮತ್ತೊಂದು ಹಂತಕ್ಕೆ ಹೋಗಿದ್ದು, ತೋತಾಪುರಿ ಚಿತ್ರೀಕರಣಕ್ಕೆಂದು ಸದ್ಯ ಮೈಸೂರಿನಲ್ಲಿರುವ ಜಗ್ಗೇಶ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಮೇಕಪ್ ಹಾಕಿ ಶೂಟ್ ಗೆ ರೆಡಿಯಾಗಿ ಕುಳಿತಿದ್ದ ಜಗ್ಗೇಶ್ ಅವರಿಗೆ ದಾಸನ ಅಭಿಮಾನಿಗಳು ಬಿಗ್ ಶಾಕ್ ನೀಡಿದ್ದು, ಏಕಾಏಕಿ ಸೆಟ್ ಗೆ ನುಗ್ಗಿ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡಿದ್ದಾರೆ. ನೀವು ಕ್ಷಮೆ ಕೇಳಲೇಬೇಕು.. ದರ್ಶನ್ ಅಭಿಮಾನಿಗಳ ಬಗ್ಗೆ ಯಾಕೆ ಹೀಗೆಲ್ಲಾ ಮಾತನಾಡಿದ್ದೀರಿ. ಜಗ್ಗೇಶ್ ಅಂದರೆ ನೀವೇ ತಾನೆ.. ಮತ್ತೊಬ್ಬ ಜಗ್ಗೇಶ್ ಇದ್ದಾರಾ.. ಅಂತಾ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದ್ದಾರೆ.
ಈ ವೇಳೆ ನೆಲದ ಮೇಲೆ ಕುಳಿತಿದ್ದ ಜಗ್ಗೇಶ್, ಒಬ್ಬ ಹಿರಿಯನಿಗೆ ಹೀಗೆನಾ ಮರ್ಯಾದೆ ಕೊಡೊದು… ದರ್ಶನ್ ಜೊತೆ ಚೆನ್ನಾಗೇ ಇದ್ದೀನಿ, ಇಬ್ಬರು ಮಾತನಾಡುತ್ತಿದೀವಿ. ಇದು ಮೂರನೇ ವ್ಯಕ್ತಿಯ ಕಿತಾಪತಿ. ನಾನು ಆ ರೀತಿ ಮಾತನಾಡಿಲ್ಲ. ಈ ಬಗ್ಗೆ ನಾನು ಅಂದೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಂತ ಅಭಿಮಾನಿಗಳಿ ಮನವರಿಕೆ ಮಾಡಿಕೊಡಲು ಮುಂದಾದ್ರು. ಆದ್ರೆ ಜಗ್ಗೇಶ್ ಅವರ ಮಾತನ್ನ ಕೇಳುವ ಪ್ರಯತ್ನವನ್ನೇ ಮಾಡದ ಡಿ ಬಾಸ್ ಅಭಿಮಾನಿಗಳು ಪದೇ ಪದೇ ಜಗ್ಗೇಶ್ ಅವರಿಗೆ ಚುಚ್ಚುವಂತೆ ಮಾತನಾಡಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು. ಜಗ್ಗಣ್ಣನನ ಮಾತನಾಡಲು ಅವಕಾಶ ಕೊಡದೇ ಎಗರಾಡಿದ್ರು. ಈ ಗ್ಯಾಪ್ ನಲ್ಲಿ ಜಗ್ಗೇಶ್ ಅವರು ದರ್ಶನ್ ಅವರಿಗೆ ಕರೆ ಮಾಡಿದ್ರೂ ಯಾವುದೇ ಪ್ರಯೋಜನ ಆಗಲೇ ಇಲ್ಲ.ಕೊನೆಗೆ ಜಗ್ಗೇಶ್ ಅವರು ಕ್ಷಮೆ ಕೇಳಿ ಅಭಿಮಾನಿಗಳನ್ನು ಶಾಂತಗೊಳಿಸಿದ್ರು. ಬಳಿಕ ಡಿ ಬಾಸ್ ಅಭಿಮಾನಿಗಳು ಅಲ್ಲಿಂದ ಹೊರಟು ಹೋದ್ರು.
ಇದೇನಾ ಹಿರಿಯ ನಟನಿಗೆ ಕೊಡೋ ಗೌರವ..?
ಸದ್ಯ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರವರ ದೃಷ್ಠಿಕೋನದಲ್ಲಿ ಎಡಿಟ್ ಮಾಡಿಕೊಂಡು ಮೆರೆದಾಡುತ್ತಿದ್ದಾರೆ. ಆದ್ರೆ ಇಂದಿನ ಘಟನೆ ನಿಜಕ್ಕೂ ದುರದೃಷ್ಠಕರ. ಯಾಕೆಂದ್ರೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 40ವರ್ಷ ಕನ್ನಡ ಚಿತ್ರರಂಗದಲ್ಲಿ ದುಡಿದು, ಗಾಡ್ ಫಾದರ್ ಇಲ್ಲದೇ ಕೇವಲ ಪ್ರತಿಭೆಯಿಂದ ಬೆಳೆದು, ಕನ್ನಡಿಗರ ಬಾಯಲ್ಲಿ ನವರಸನಾಯಕ ಎಂದು ಕರೆಸಿಕೊಂಡು ಕನ್ನಡಿಗರ ಮನೆಮನದಲ್ಲಿ ಸ್ಥಾನ ಪಡೆದು, ಇನ್ನೂ ಕಲಾಸೇವೆ ಮಾಡುತ್ತಿರುವ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿ ನಿಂದಿಸುವ ಮುನ್ನ ಒಂದು ಕ್ಷಣ ಯೋಚನೆ ಮಾಡಬೇಕಿತ್ತು.