ಮಂಡ್ಯ: ಮಳೆ ಕೊರತೆ ಹಾಗೂ ಸಾಲದ ಬಾಧೆಯಿಂದ ಕಂಗೆಟ್ಟಿದ್ದ ತಾಲೂಕಿನ ಕಾಡೇನಹಳ್ಳಿ ಗ್ರಾಮದ ಯುವ ರೈತ ಯೋಗೇಶ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಕುಟುಂಬಸ್ಥರನ್ನು ಭೇಟಿ ಮಾಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮೃತ ಯೋಗೇಶ್ ಅವರು ಬೆಳೆಗಾಗಿ ವಿವಿಧ ಬ್ಯಾಂಕ್ಗಳು ಹಾಗೂ ಕೈಸಾಲ ಸೇರಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಆದರೆ ಈ ಬಾರಿ ಸಕಾಲಕ್ಕೆ ಮಳೆಯಾಗದೆ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿದ್ದರು. ಬೆಳೆಯೂ ಇಲ್ಲದೆ, ಸಾಲ ತೀರಿಸಲು ದಾರಿಕಾಣದೆ ತೀವ್ರ ಮಾನಸಿಕ ವೇದನೆಗೆ ಒಳಗಾಗಿದ್ದ ಅವರು ಜಮೀನಿನ ಬಳಿಯೇ ವಿಷ ಸೇವಿಸಿ ದುಡುಕಿನ ನಿರ್ಧಾರ ಕೈಗೊಂಡಿದ್ದರು.
ಕುಟುಂಬಕ್ಕೆ ಸರ್ಕಾರದ ಪರಿಹಾರ ಕೊಡಿಸುವ ಭರವಸೆ: ಯೋಗೇಶ್ ಅವರ ನಿವಾಸಕ್ಕೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ಕುಟುಂಬದವರಿಗೆ ಧೈರ್ಯ ತುಂಬಿ ಸಾಂತ್ವನ ತಿಳಿಸಿದರು. “ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ಪರಿಹಾರ ಹಾಗೂ ಅಗತ್ಯ ನೆರವನ್ನು ಆದಷ್ಟು ಶೀಘ್ರವಾಗಿ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇಂತಹ ಕಷ್ಟದ ಸಂದರ್ಭದಲ್ಲಿ ನಮ್ಮ ಇಡೀ ತಂಡ ಮೃತ ಯೋಗೇಶ್ ಅವರ ಕುಟುಂಬದ ಬೆಂಬಲಕ್ಕೆ ನಿಲ್ಲಲಿದೆ” ಎಂದು ಭರವಸೆ ನೀಡಿದರು.
ರೈತರು ಜೀವ ಕಳೆದುಕೊಳ್ಳಬೇಡಿ: ಶಾಸಕರ ಮನವಿ: ಇದೇ ವೇಳೆ ಕ್ಷೇತ್ರದ ರೈತ ಸಮುದಾಯವನ್ನು, “ಬೆಳೆ ನಷ್ಟ ಅಥವಾ ಸಾಲದ ಹೊರೆ ಎಷ್ಟೇ ದೊಡ್ಡದಾಗಿದ್ದರೂ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮ್ಮ ಜೀವ ನಿಮ್ಮ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಸಮಾಜಕ್ಕೆ ಅತ್ಯಂತ ಅಮೂಲ್ಯವಾದುದು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ರೈತರ ಬೆನ್ನಿಗೆ ನಾವಿದ್ದೇವೆ. ಸರ್ಕಾರ ಮತ್ತು ರೈತ ಸಂಘಟನೆಗಳು ಸದಾ ನಿಮ್ಮ ಜೊತೆಗಿರುತ್ತವೆ. ದಯವಿಟ್ಟು ಯಾರೂ ಧೃತಿಗೆಟ್ಟು ಪ್ರಾಣ ಕಳೆದುಕೊಳ್ಳುವಂತಹ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಯಾವುದೇ ಸಮಸ್ಯೆ ಇದ್ದರೂ ಧೈರ್ಯದಿಂದ ಎದುರಿಸಿ, ಒಟ್ಟಾಗಿ ಪರಿಹಾರ ಕಂಡುಕೊಳ್ಳೋಣ” ಎಂದು ಕಳಕಳಿಯ ಕರೆ ನೀಡಿದರು.








