Dasara 2022 | ರೈತ ದಸರಾದಲ್ಲಿ ಗಮನ ಸೆಳೆದ ಗೋಣಿಚೀಲದ ಓಟ
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಅದ್ಧೂರಿಯಾಗಿ ನಡೆಯುತ್ತಿದ್ದು, ಆರನೇ ದಿನವಾದ ಇಂದು ಹಲವು ಕಾರ್ಯಕ್ರಮಗಳು ದಸರಾ ಸಂಭ್ರಮಕ್ಕೆ ಮೆರಗು ನೀಡಿವೆ.
ಮುಂಜಾನೆ ನಗರದ ಟೌನ್ ಹಾಲ್ ನಿಂದ ಆರಂಭಗೊಂಡ ಪಾರಂಪರಿಕ ನಡಿಗೆಗೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದ್ರು.
ಇದೇ ರೀತಿ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆಯೋಜಿಸಿದ್ದ ವಿಂಟೇಜ್ ಕಾರ್ ಶೋ ಮತ್ತು ರ್ಯಾಲಿಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

80, 100 ವರ್ಷ ಹಳೆಯದಾದ ಮ್ಯಾರಿಸ್ ಮೈನರ್, ಅಸ್ಟಿನ್, ರೋಡ್ ಮಾಸ್ಟರ್, ರೋಲ್ಸ್ ರಾಯ್ಸ್ ಸೇರಿದಂತೆ ನಾನಾ ಮಾಡೆಲ್ ಕಾರುಗಳು ಮತ್ತು ಸ್ಕೂಟರ್ ಗಳ ವೀಕ್ಷಣೆ ಮಾಡಿದ ಸಚಿವರು, ವಿಂಟೇಜ್ ಕಾರಿನಲ್ಲಿ ಸಂಚರಿಸಿದರು.
ಇನ್ನು ರೈತ ದಸರಾ ಹೆಚ್ಚು ಆಕರ್ಷಣೆಯಾಗಿದ್ದು, ರೈತರ ಗ್ರಾಮೀಣ ಕ್ರೀಡಾಕೂಟಕ್ಕೆ ಓವೆಲ್ಸ್ ಮೈದಾನದಲ್ಲಿ ಬಲೂನುಗಳನ್ನು ಹಾರಿ ಬಿಡುವ ಮೂಲಕ ಸಚಿವರು ಚಾಲನೆ ನೀಡಿದರು.
ಗೋಣಿಚೀಲದಲ್ಲಿ ಓಡುವ ಸ್ಪರ್ಧೆ, 50 ಕೆ ಜಿ ಗೊಬ್ಬರದ ಮೂಟೆ ಹೊತ್ತುಕೊಂಡು ಓಡುವ ಸ್ಪರ್ಧೆ ಹಾಗೂ ತುಂಬಿದ ಬಿಂದಿಗೆ ಹೊತ್ತು ರೈತ ಮಹಿಳೆಯರು ಓಡುವ ಸ್ಪರ್ಧೆ ಗಮನ ಸೆಳೆಯಿತು.