ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಮಠಾಧೀಶ ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಹೀಗಾಗಿ, ಯಾವುದೇ ರೀತಿಯಲ್ಲಿ ನನ್ನನ್ನು ಉಪಯೋಗಿಸಿಕೊಳ್ಳಬಹುದು. ಆದರೆ, ನನ್ನ ಬಾಯಿಂದ ಯಾವುದೇ ತಪ್ಪು ಮಾತುಗಳು ಹೊರಬರದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.
ಮಾಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಅವರು ತಿಳಿಸಿದರು. ಪುತ್ತಿಗೆ ಶ್ರೀಗಳ ಜೊತೆ ಅಂಚೆಚೀಟಿ ಬಿಡುಗಡೆ ಮಾಡಿ ಶ್ರೀಕೃಷ್ಣನ ದಿವ್ಯ ದರ್ಶನ ಪಡೆದಿದ್ದು ನನ್ನ ಜೀವನದ ಸಾರ್ಥಕ ಘಳಿಗೆ ಎಂದು ಡಿಕೆಶಿ ಹೇಳಿದರು.
ಶಿವಕುಮಾರ್ ಅವರು ಮಾತನಾಡುತ್ತಾ, ಧರ್ಮ, ಪೂಜೆ, ಭಕ್ತಿ ಕೇವಲ ಪ್ರದರ್ಶನಕ್ಕಿರುವ ವಸ್ತುಗಳಲ್ಲ. ಬದಲಾಗಿ, ಎಲ್ಲರ ಆಚಾರ-ವಿಚಾರಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು. ಕೃಷ್ಣನ ವಿಶ್ವರೂಪ ದರ್ಶನ ನೋಡಿದಾಗ ನನ್ನ ಕಳೆದ 50-60 ವರ್ಷಗಳ ಬದುಕು ಕಣ್ಣ ಮುಂದೆ ಸುಳಿದು ಹೋಯಿತು ಎಂದು ಅವರು ಹೇಳಿದರು. ನಾನು ಬಂಧಿಖಾನೆ ಸಚಿವನಾಗಿದ್ದಾಗಲೂ ಕೃಷ್ಣ ಮಠದಿಂದ ನನಗೆ ಆಹ್ವಾನ ಬಂದಿತ್ತು ಎಂದರು.
ಧರ್ಮ ಮತ್ತು ಯಶಸ್ಸಿನ ಕುರಿತು ಡಿಕೆಶಿ ಮಾತು
ನಮ್ಮ ಧರ್ಮ ಮನುಷ್ಯನಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಮಾರ್ಗವಾಗಿದೆ. ಶ್ರೀಗಳು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ನಾನು ನೋಡಿದೆ. ಆ ಭಾಷಣದಲ್ಲಿ ಅವರು, ‘ನಾವು ಧರ್ಮಕ್ಕೆ ಅಂಟಿಕೊಂಡಿರಬಾರದು. ನಾವು ಬಯಸಿ ಇಚ್ಛಿಸುವ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ. ಇದು ಸರಿಯಾದ ಮಾತು ಎಂದು ನಾನು ಒಪ್ಪುತ್ತೇನೆ ಎಂದು ಡಿಸಿಎಂ ಹೇಳಿದರು.
“ಧರ್ಮ ಯಾವುದಾದರೂ ತತ್ವ ಒಂದೇ. ದೇವರು ಒಬ್ಬನೇ. ನಾವು ಅನೇಕ ಹೆಸರಿನಲ್ಲಿ ದೇವರನ್ನು ಕರೆಯುತ್ತೇವೆ. ಕೃಷ್ಣ ಒಬ್ಬ ಶಿಕ್ಷಕ, ಮಾರ್ಗದರ್ಶಕ, ಚಿಂತಕ, ರಾಜಕಾರಣಿ, ಪ್ರೇಮಿ, ತತ್ವಜ್ಞಾನಿ” ಎಂದು ಅವರು ಹೇಳಿದರು.
ಜೀವನದಲ್ಲಿ ಯಶಸ್ಸು ಗಳಿಸಲು, ಧರ್ಮರಾಯನ ಧರ್ಮ, ಕರ್ಣನ ದಾನ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ, ಮತ್ತು ಕೃಷ್ಣನ ತಂತ್ರ ಕೂಡ ಇರಬೇಕು ಎಂದು ಅವರು ನುಡಿದರು.
ಅಲೆಕ್ಸಾಂಡರ್ ಮತ್ತು ಭಾರತೀಯ ಸಂಸ್ಕೃತಿ
ಶ್ರೀಗಳ ಮಾತುಗಳನ್ನು ಕೇಳಿದಾಗ ನನಗೆ ಅಲೆಕ್ಸಾಂಡರ್ ಕಥೆ ನೆನಪಾಯಿತು. ಅಲೆಕ್ಸಾಂಡರ್ ಭಾರತದ ಮೇಲೆ ದಾಳಿ ಮಾಡುವ ಮೊದಲು ತನ್ನ ಗುರು ಅರಿಸ್ಟಾಟಲ್ ಅವರನ್ನು ಭೇಟಿ ಮಾಡುತ್ತಾರೆ. ಆಗ ಅರಿಸ್ಟಾಟಲ್ ಅವರು, “ನೀನು ಭಾರತವನ್ನು ಗೆಲ್ಲಬೇಕಾದರೆ, ಅಲ್ಲಿಂದ ರಾಮಾಯಣ ಗ್ರಂಥ, ಭಗವದ್ಗೀತೆ, ಗಂಗಾ ಜಲ, ಕೃಷ್ಣನ ಕೊಳಲು ಹಾಗೂ ಒಬ್ಬ ತತ್ವಜ್ಞಾನಿಯನ್ನು ತೆಗೆದುಕೊಂಡು ಬಾ. ಆಗ ನೀನು ಇಡೀ ಭಾರತವನ್ನು ಗೆದ್ದಂತೆ” ಎಂದು ಹೇಳಿದ ಕಥೆಯನ್ನು ಡಿಕೆಶಿ ಸ್ಮರಿಸಿದರು. ನಮ್ಮ ಸಂಸ್ಕೃತಿಯೇ ಈ ದೇಶದ ಅತಿದೊಡ್ಡ ಆಸ್ತಿ ಎಂದು ಅವರು ತಿಳಿಸಿದರು.
ಕೃಷ್ಣನ ಕೊಳಲು ಒಂದು ಸಣ್ಣ ಬಿದಿರು. ಆದರೆ ಅದರಿಂದ ಹೊರಹೊಮ್ಮುವ ನಾದ ನಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ. ಚಂಡಿವಾದ್ಯಕ್ಕೆ ಬಳಸುವ ಚರ್ಮವೂ ಅದೇ ರೀತಿ. ಇದೆಲ್ಲ ಪ್ರಕೃತಿಯ ವಿಸ್ಮಯ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.








