ನವದೆಹಲಿ : ಕೊರೊನಾ ಹಾವಳಿಯಿಂದ ದೇಶದ ಅರ್ಥವ್ಯವಸ್ಥೆ ತತ್ತರಿಸಿ ಹೋಗಿದೆ. ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ನೀಡುವ ಅತಿ ಸಣ್ಣ, ಸಣ್ಣ, ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೊರೊನಾ ಲಾಕ್ ಡೌನ್ ನಿಂದ ಭಾರೀ ದುಷ್ಪರಿಣಾಮ ಆಗಿದೆ.
ಈ ಹಿನ್ನೆಲೆಯಲ್ಲಿ ”ಅತಿ ಸಣ್ಣ, ಸಣ್ಣ, ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಸಹಾಯ ಮಾಡಲು ಕೇಂದ್ರ ಹಣಕಾಸು ಇಲಾಖೆ 1 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಬೇಕು” ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ, ಈ ಎಂಎಸ್‌ಎಂಇಗಳಲ್ಲಿ ತೊಡಗಿರುವ 11 ಕೋಟಿ ಜನರ ಜನರಿಗೆ ವೇತನ ಮತ್ತು ಸಂಬಳ ನೀಡಲು ಸಹಾಯ ಮಾಡಲು 6.3 ಕೋಟಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 1 ಲಕ್ಷ ಕೋಟಿ ರೂ.ಗಳ ವೇತನ ಸಂಕಷ್ಟದ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.
ಅಲ್ಲದೆ “ಕೋವಿಡ್ -19 ಪ್ರಾರಂಭವಾದಾಗಿನಿಂದ ವ್ಯವಹಾರಗಳಿಗೆ ಯಾವುದೇ ಹಣಕಾಸಿನ ಪ್ಯಾಕೇಜ್ ಅಥವಾ ಸಹಾಯವನ್ನು ಘೋಷಿಸಲಾಗಿಲ್ಲ ಎಂಬುದು ಆಶ್ಚರ್ಯಕರವಾಗಿದೆ. ಸರ್ಕಾರವು ಸಮಯವನ್ನು ಹೊಂದಿರಬಹುದು. ಆದರೆ, ಎಂಎಸ್‌ಎಂಇಗಳು ಉಳಿಯಲು ಸಮಯ ಇಲ್ಲ. ಎಂಎಸ್‌ಎಂಇಗಳನ್ನು ಸರ್ಕಾರ ಮುಳಗಿಸುತ್ತೋ ಅಥವಾ ತೇಲಿಸುತ್ತೋ ಎಂಬುದನ್ನು ಕಾಯ್ದು ನೋಡಬೇಕಿದೆ” ಎಂದು ಕೇಂದ್ರದ ವಿರುದ್ಧ ಚಿದಂಬರಂ ಕಿಡಿಕಾರಿದ್ದಾರೆ.