2020ರ ದೆಹಲಿ ಗಲಭೆ ಪ್ರಕರಣ : ತನಿಖೆ ವಿಫಲ – ದೆಹಲಿ ಪೊಲೀಸರಿಗೆ ದಂಡ
ನವದೆಹಲಿ: ಫೆಬ್ರವರಿ 2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಲ್ಲಿ ದೆಹಲಿ ಪೊಲೀಸರು ದಯನೀಯವಾಗಿ ವಿಫಲರಾಗಿದ್ದಾರೆ ಎಂದು ಉಲ್ಲೇಖೀಸಿರುವ ನ್ಯಾಯಾಲಯವು, ಪೊಲೀಸರಿಗೆ 25 ಸಾವಿರ ರೂ. ದಂಡ ವಿಧಿಸಿದೆ.
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 2020ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಹಲಿ ಪೊಲೀಸರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ದಂಡ ವಿಧಿಸಿದೆ.
ಪ್ರಕರಣವೊಂದನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ದೆಹಲಿ ಪೊಲೀಸರಿಗೆ ಸ್ಥಳೀಯ ನ್ಯಾಯಾಲಯವು 25 ಸಾವಿರ ದಂಡ ವಿಧಿಸಿದೆ ಹಾಗೂ ಪೊಲೀಸರ ಕ್ರಮವನ್ನು ಕೋರ್ಟ್ ತೀವ್ರವಾಗಿ ಖಂಡಿಸಿದೆ. ಗಲಭೆಯಲ್ಲಿ ಹಲ್ಲೆಗೆ ಒಳಗಾದ ಮೊಹಮ್ಮದ್ ನಾಸಿರ್ ದೆಹಲಿ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಲು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಕೂಡಾ ಹೇಳಿದೆ.
ಗಲಭೆಯ ಸಂದರ್ಭದಲ್ಲಿ ಕಣ್ಣಿಗೆ ಗುಂಡು ಬಿದ್ದಿದ್ದ ಮೊಹಮ್ಮದ್ ನಾಸಿರ್, ತನ್ನ ಪ್ರದೇಶದ ಆರು ಜನರ ವಿರುದ್ಧ ದೂರು ನೀಡಿದ್ದು, ಪ್ರತಿಯೊಬ್ಬರ ಹೆಸರನ್ನು ಉಲ್ಲೇಖ ಮಾಡಿದ್ದನು. ಈ ಪ್ರಕರಣದ ಆರೋಪಿಗಳಲ್ಲಿ ಓರ್ವ ಬಿಜೆಪಿ ಮಾಜಿ ಶಾಸಕ ನರೇಶ್ ಗೌರ್ ಆಗಿದ್ದಾರೆ.
ಸಂಪೂರ್ಣವಾಗಿ ಸಂಬಂಧವಿಲ್ಲದ ಪ್ರಕರಣವೊಂದಕ್ಕೆ ಪೊಲೀಸರು ಆತನ ದೂರನ್ನು ಹೋಲಿಕೆ ಮಾಡಲು ಯತ್ನಿಸಿದಾಗ ಮೊಹಮ್ಮದ್ ನಾಸಿರ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ರನ್ನು ಸಂಪರ್ಕಿಸಿದ್ದಾನೆ. ಕೆಳ ನ್ಯಾಯಾಲಯವು ಅರ್ಜಿಯನ್ನು ಎತ್ತಿಹಿಡಿದಿದ್ದು, ಈ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ವರದಿಯನ್ನು ಸಲ್ಲಿಸುವಂತೆ ಒತ್ತಾಯಿಸಿದೆ. ಆದರೆ ಪೊಲೀಸರು ಸೆಷನ್ಸ್ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಿದರು.
ಯುದ್ಧ ಪೀಡಿತ ಅಫ್ಘಾನ್‌ನಲ್ಲಿ ಹೆಚ್ಚಾದ ಮಾನವೀಯ ಬಿಕ್ಕಟ್ಟು – ವಿಶ್ವಸಂಸ್ಥೆ ಕಳವಳ
ದೆಹಲಿಯ ನ್ಯಾಯಾಲಯವೊಂದು ನೀಡಿದ ಆದೇಶವನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿರುವ ದಿಲ್ಲಿ ಪೊಲೀಸರ ಕ್ರಮವನ್ನು ಆಕ್ಷೇಪಿಸಿರುವ ನ್ಯಾಯಾಲಯ, ಪೊಲೀಸರು ಆರೋಪಿಗಳಿಗೆ ಸಮರ್ಥನೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಹಾಗೂ ತಮ್ಮ ಶಾಸನಬದ್ಧ ಕರ್ತವ್ಯಗಳನ್ನುನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದೆ.
ಭಜನಪುರ ಪೊಲೀಸ್ ಠಾಣಾಧಿಕಾರಿ ಹಾಗೂ ಇತರ ಅಧಿಕಾರಿಗಳ ಮೇಲೆ ಈ ಸಂಬಂಧ ರೂ. 25,000 ದಂಡ ಹೇರಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್, ತಮ್ಮ ಆದೇಶದ ಪ್ರತಿಯನ್ನು ಪೊಲೀಸ್ ಆಯುಕ್ತರಿಗೂ ಸಲ್ಲಿಸಿ ಈ ನಿರ್ದಿಷ್ಟ ಪ್ರಕರಣದಲ್ಲಿ ತನಿಖೆಯ ಕುರಿತಂತೆ ಅವರ ಗಮನ ಸೆಳೆದರಲ್ಲದೆ ಸೂಕ್ತ ಕ್ರಮಕ್ಕೂ ಸೂಚಿಸಿದ್ದಾರೆ. ಮೊಹಮ್ಮದ್ ನಾಸಿರ್ ಎಂಬಾತನ ದೂರಿನ ಆಧಾರದಲ್ಲಿ ದಿಲ್ಲಿ ಪೊಲೀಸರಿಗೆ 24 ಗಂಟೆಗಳೊಳಗೆ ಎಫ್‍ಐಆರ್ ದಾಖಲಿಸುವಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 2020ರಲ್ಲಿ ಸೂಚಿಸಿದ್ದರು.
ಆತ ತನ್ನ ದೂರಿನಲ್ಲಿ ಹಲವು ಮಂದಿಯ ಹೆಸರುಗಳನ್ನು ಉಲ್ಲೇಖಿಸಿದ್ದರು. ಆದರೆ ಪೊಲೀಸರು ಎಫ್‍ಐಆರ್ ದಾಖಲಿಸಲು ಕ್ರಮ ಕೈಗೊಳ್ಳದೇ ಇದ್ದುದರಿಂದ ಕೋರ್ಟಿನ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಘಟನೆ ಸಂಬಂಧ ಈಗಾಗಲೇ ಎಫ್‍ಐಆರ್ ದಾಖಲಾಗಿದೆ ಆದರೆ ನಾಸಿರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ ವ್ಯಕ್ತಿಗಳ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದರು.