ಬೆಂಗಳೂರು: ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ಸ್ಥಳಕ್ಕೆ ಸ್ಥಳೀಯ ಶಾಸಕ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ, ಗಾಯಗೊಂಡ ಹಸುಗಳನ್ನು ಪರಿಶೀಲಿಸಿದರು.
ಜಮೀರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ನಾನು, ಮುಖ್ಯಮಂತ್ರಿಗಳು ಬಳ್ಳಾರಿಯಲ್ಲಿ ಇದ್ದೆವು. ವಿಚಾರ ಗೊತ್ತಾದ ತಕ್ಷಣ ಮುಖ್ಯಮಂತ್ರಿಗಳು ಕಮೀಷನರ್ಗೆ ಕರೆ ಮಾಡಿ, ಅದು ಯಾರೇ ಆಗಿರಲಿ, ಕೂಡಲೇ ಬಂಧಿಸುವಂತೆ ತಿಳಿಸಿದ್ದಾರೆ. ನಾನು ಕೂಡ ಪೊಲೀಸರಿಗೆ ಹೇಳಿದ್ದೇನೆ. ಯಾರೇ ಆದರೂ ಅವನ ಮೇಲೆ ಕಠಿಣ ಕ್ರಮ ಆಗಬೇಕು,” ಎಂದು ಹೇಳಿದರು.
ಅವರು ಮುಂದುವರೆದು, “ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ. ಅವರ ಕುಟುಂಬದ ಜೊತೆಗೆ ನಾನು ಇದ್ದೇನೆ,” ಎಂದು ಭರವಸೆ ನೀಡಿದರು. ಜಮೀರ್ ಅವರು ಸ್ಥಳದಲ್ಲಿದ್ದ ವಿನಯ್ ಎಂಬಾತನಿಗೆ, ” ಅವರ ಮನೆ ಬಳಿ ಹೋಗಿ ಹೊಸ ಹಸುಗಳನ್ನು ಕೊಡಿಸಿ. ಹಸು ಕೊಡಿಸೋ ಜವಾಬ್ದಾರಿ ನಿನ್ನದು,” ಎಂದು ಸೂಚನೆ ನೀಡಿದರು.
ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಜನರು ಪ್ರಾಣಿಗಳ ಮೇಲೆ ದ್ವೇಷ ತೋರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.