ಧರ್ಮಸ್ಥಳದಲ್ಲಿ ನಡೆದಿರುವ ಅನುಮಾನಾಸ್ಪದ ಸಾವುಗಳ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡುವ ಕುರಿತಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಸಂಬಂಧ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್ ನೇತೃತ್ವದ ವಕೀಲರ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎಸ್‌ಐಟಿ ರಚನೆ ಮಾಡುವಂತೆ ಮನವಿ ಮಾಡಿದೆ.
ವಕೀಲರ ನಿಯೋಗವು ಮುಖ್ಯಮಂತ್ರಿ ನಿವಾಸ ‘ಕಾವೇರಿ’ಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಧರ್ಮಸ್ಥಳದಲ್ಲಿ ಸಂಭವಿಸಿರುವ ಅನುಮಾನಾಸ್ಪದ ಸಾವುಗಳ ಕುರಿತು ಪ್ರಾಮಾಣಿಕ ತನಿಖೆ ನಡೆಯಬೇಕು. ಸಾರ್ವಜನಿಕರಲ್ಲಿ ಇರುವ ಅನುಮಾನ ನಿವಾರಣೆಯಾಗಲು ಮಾತ್ರವಲ್ಲ, ನೈತಿಕವಾಗಿ ಸಹ ಇದು ಅಗತ್ಯ ಎಂದು ಮನವಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ನಾವು ಗಮನ ಹರಿಸಿದ್ದೇವೆ. ಎಸ್‌ಐಟಿ ರಚನೆ ಮಾಡುವ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ವಕೀಲರ ನಿಯೋಗ ತಿಳಿಸಿದೆ.
ಇತ್ತೀಚೆಗೆ ಧರ್ಮಸ್ಥಳದಲ್ಲಿ ಸಂಭವಿಸಿದ ಹಲವು ಅನುಮಾನಾಸ್ಪದ ಸಾವುಗಳ ಕುರಿತು ಸಾರ್ವಜನಿಕರಲ್ಲಿ ಶಂಕೆ ಮೂಡಿದ್ದು, ಸಾಮಾಜಿಕ ಹೋರಾಟಗಾರರು, ವಕೀಲರು ಹಾಗೂ ಹಕ್ಕು ಸಮಿತಿಗಳು ಸರ್ಕಾರದ ಬಳಿ ತನಿಖೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ.
ಇದೇ ಹಿನ್ನೆಲೆ ಸರ್ಕಾರ ಎಸ್‌ಐಟಿ ರಚನೆ ಮಾಡುವ ಸಾಧ್ಯತೆ ಇದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಇದಕ್ಕೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.








