ಬೆಂಗಳೂರು: ತನ್ನ ಪ್ರೀತಿಯನ್ನು ಗೆಳತಿ ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ನಗರದ ಕೆಂಗೇರಿಯ (Kengeri) ಕೊಡಿಗೆ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ರಾಕೇಶ್ ಹೀಗೆ ಮೃತಪಟ್ಟ ಯುವಕ ಎನ್ನಲಾಗಿದೆ. ಈತ ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ನಿವಾಸಿ ಎನ್ನಲಾಗಿದೆ. ಈತ ಕಳೆದ ಕೆಲವು ವರ್ಷಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆದರೆ, ಆ ಯುವತಿ ಇತ್ತೀಚೆಗೆ ಬೇರೊಬ್ಬನೊಂದಿಗೆ ವಿವಾಹಕ್ಕೆ ಮುಂದಾಗಿದ್ದಳು. ಹೀಗಾಗಿ ರಾಕೇಶ್ ನನ್ನು ದೂರ ಮಾಡುತ್ತಿದ್ದಳು.
ಇದರಿಂದ ಬೇಸರಗೊಂಡು ಪ್ರಶ್ನಿಸಿದ್ದಾನೆ. ಈ ಮಧ್ಯೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಆಗ ಅವಳು ಮದುವೆಯ ವಿಷಯ ಹೇಳಿದ್ದಾಳೆ. ಇದರಿಂದ ಬೇಸರಗೊಂಡ ಆತ ಯುವತಿಯ ಮನೆಯ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.