ಬೆಂಗಳೂರು ಹೊರವಲಯದ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿನ 1,777 ಎಕರೆ ಭೂಮಿ ಭೂಸ್ವಾಧೀನ ಮಾಡುವ ಯೋಜನೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಹಲವು ದಿನಗಳಿಂದ ಭೂಸ್ವಾಧೀನ ವಿರೋಧಿಸಿ ಹೋರಾಟ ನಡೆಸುತ್ತಿದ್ದ ರೈತರ ಮನವಿ ಮತ್ತು ಪ್ರತಿಭಟನೆಯನ್ನು ಗಮನದಲ್ಲಿ ಇಟ್ಟುಕೊಂಡು, ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿ 2019ರಲ್ಲಿಯೇ ಅಧಿಸೂಚನೆ ಹೊರಬಿದ್ದಿತ್ತು. ಆದರೆ ಇದನ್ನು ವಿರೋಧಿಸಿ ರೈತರು ಬರೋಬ್ಬರಿ 1198 ದಿನಗಳಷ್ಟು ದೀರ್ಘವಾದ ಹೋರಾಟ ನಡೆಸಿದರು. ಕೆಲವು ಸಮಯಗಳ ಹಿಂದೆ ರೈತರ ನಿಯೋಗ ಮತ್ತು ಸರ್ಕಾರದ ನಡುವೆ ಸಂಧಾನ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ಸಭೆ ಫಲಪ್ರದವಾಯಿತು.
ಸರ್ಕಾರದ ಸ್ಪಷ್ಟ ನಿರ್ಧಾರ:
ಸರ್ಕಾರ ಈಗ 1,777 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಭೂಸ್ವಾಧೀನ ಅಧಿಸೂಚನೆಯನ್ನು ನಾವು ರದ್ದುಪಡಿಸಿದ್ದೇವೆ. ಬಲವಂತದಿಂದ ಭೂಮಿ ಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ..
ಆದರೆ ಸರ್ಕಾರದ ಹೊಸ ಷರತ್ತುಗಳು ಹೀಗಿವೆ:
ಯಾವುದೇ ರೈತನು ಅಥವಾ ಭೂ ಮಾಲೀಕರು ಸ್ವಯಂ ಪ್ರೇರಿತರಾಗಿ ಕೈಗಾರಿಕಾ ಉದ್ದೇಶಕ್ಕಾಗಿ ತಮ್ಮ ಭೂಮಿಯನ್ನು ಸರ್ಕಾರಕ್ಕೆ ಕೊಡುವುದಾಗಿ ಮುಂದೆ ಬಂದರೆ, ಸರ್ಕಾರ ಅದನ್ನು ಒಪ್ಪಿಕೊಳ್ಳಲಿದೆ.
ಆ ಭೂಮಿಗೆ ಸೂಕ್ತವಾದ ಪರಿಹಾರ ನೀಡಲಾಗುವುದು.
ಕೊಟ್ಟ ಭೂಮಿಯನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು.
ಆದರೆ, ಯಾರು ಭೂಮಿ ಕೊಡಲು ಒಪ್ಪಿಕೊಳ್ಳುವುದಿಲ್ಲ, ಅವರ ಭೂಮಿಯನ್ನು ಸಂಪೂರ್ಣವಾಗಿ ಕೈಬಿಡಲಾಗುವುದು.
ರೈತರ ಪ್ರತಿಕ್ರಿಯೆ:
ದೇವನಹಳ್ಳಿಯ ಸುತ್ತಲಿನ ಗ್ರಾಮಗಳ ರೈತರು ಹಾಗೂ ಹೋರಾಟಗಾರರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಅನಿಯಮಿತ ಧರಣಿ, ಪ್ರತಿಭಟನೆ, ಸಭೆಗಳಲ್ಲಿ ಭಾಗವಹಿಸಿದ್ದ ರೈತರಿಗೆ ಇದು ದೊಡ್ಡ ಜಯವೆನ್ನಬಹುದು.








