ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ಸುರಿದ ಧಾರಾಕಾರ ಮಳೆ ಕೆಲವೆಡೆ ಪ್ರವಾಹವನ್ನೇ ಸೃಷ್ಟಿಸಿತ್ತು. ಭಾರಿ ಮಳೆ ಹಾಗೂ ಪ್ರವಾಹದ ಹೊಡೆತಕ್ಕೆ ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ಬೆಳೆದಿರುವ ಫಸಲು ನೆಲೆಕಚ್ಚಿದೆ.
ಹೀಗಾಗಿ ಕಳೆದ 6 ತಿಂಗಳಿಂದ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಾರದೆ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಪರಿಣಾಮ ಮುಂದಿನ ದಾರಿ ಕಾಣದೆ ತಲೆ ಮೇಲೆ ಕೈಹೊತ್ತು ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ಕೊರೊನಾ ಭೀತಿಗೆ ಮಾಡಲಾಗಿದ್ದ ಲಾಕ್‍ಡೌನ್‍ನಿಂದ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಮಾರುಕಟ್ಟೆಗೆ ಸಕಾಲಕ್ಕೆ ಸಾಗಿಸಲಾಗದೆ, ಮತ್ತೆ ಕೆಲವು ರೈತರು ಬೆಳೆಗೆ ಹಾಕಿದ ಖರ್ಚು ಬಾರದ ಹಿನ್ನೆಲೆಯಲ್ಲಿ ತಾವೇ ಕಷ್ಟಪಟ್ಟು ಬೆಳೆ ಬೆಳೆಯನ್ನು ನಾಶ ಮಾಡಿ ಕಣ್ಣೀರು ಹಾಕಿದ್ದರು.
ಆದರೆ, ಈಗ ಪರಿಸ್ಥಿತಿ ಬದಲಾಗಿದೆ, ಕೊರೊನಾ ಭೀತಿಯ ನಡುವೆಯೂ ಭಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣ ಬರಸಿಡಿಲಿನಂತೆ ಬಂದೆರಗಿದ್ದಾನೆ.
ಕಳೆದ ಎರಡು ತಿಂಗಳಿಂದ ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ 8750 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ.
ಹೀಗಾಗಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ರೈತ ಬಸವರಾಜ್ ಯೋಗಪ್ಪನವರ ಬೆಳೆ ನಾಶಪಡಿಸಿದ್ದಾರೆ.
ಸತತ ಮಳೆಯಿಂದ ಮೆಣಸಿನಕಾಯಿ ಬೆಳೆ ಸಕಾಲಕ್ಕೆ ಬಾರದೆ ಕೊಳೆತು ಹೀದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮೂಲಕ ಮೆಣಸಿನಕಾಯಿ ಫಸಲನ್ನು ನಾಶಪಡಿಸಿದ್ದಾರೆ. ಮಳೆರಾಯನ ಕಾಟ, ಸರ್ಕಾರದ ನಿರ್ಲಕ್ಷ್ಯದಿಂದ ರೋಸಿ ಹೋಗಿರುವ ಅನ್ನದಾತ, ಕೂಡಲೇ ಸರ್ಕಾರ ಕಣ್ತೆರೆದು ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಪರೀತ ಮಳೆಯಿಂದ ಜಮೀನು, ರಸ್ತೆಗಳೆಲ್ಲವೂ ಹದಗೆಟ್ಟು ಹೋಗಿವೆ. ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರ ನೆರವಿಗೆ ಬರಬೇಕು ಎಂಬುದು ಅನ್ನದಾತನ ಅಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel