ದಶಕದ ಹಿಂದಿನ ಸಮಯ ವಾಹಿನಿಯ ರನ್ ಭೂಮಿಯ ನೆನಪು…ಎಮ್.ಎಸ್. ಧೋನಿ ಮತ್ತು ಒಂದು ಫ್ಲಾಷ್ ಬ್ಯಾಕ್ ಸ್ಟೋರಿ…!
2011ರ ವಿಶ್ವಕಪ್.. ಭಾರತ ನೆಲದಲ್ಲಿ ನಡೆದಿದ್ದ ಪ್ರತಿಷ್ಠಿತ ಟೂರ್ನಿ. ಕೋಚ್ ಗ್ಯಾರಿ ಕಸ್ಟರ್ನ್ ಗರಡಿಯಲ್ಲಿ ಪಳಗಿರುವ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಅಂತನೇ ಬಿಂಬಿಸಲಾಗಿತ್ತು. ಅಷ್ಟೇ ಅಲ್ಲ, ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಗಾಗಿ ಈ ವಿಶ್ವಕಪ್ ಗೆಲ್ಲಲೇಬೇಕು ಎಂದು ಧೋನಿ ಹುಡುಗರು ಶಪಥ ಮಾಡಿದ್ದರು. ಐದು ವಿಶ್ವಕಪ್ ಆಡಿ ವಿಶ್ವಕಪ್ ಗೆಲ್ಲಲು ಆಗಲಿಲ್ಲ ಅನ್ನೋ ಕೊರಗು ಸಚಿನ್ ಗಿತ್ತು. ಇದನ್ನು ಮನಗಂಡಿರುವ ಟೀಮ್ ಇಂಡಿಯಾ ಹುಡುಗರು ಆರನೇ ವಿಶ್ವಕಪ್ ಗೆದ್ದು ಸಚಿನ್ ತೆಂಡುಲ್ಕರ್‍ಗೆ ಗೌರವ ಸಲ್ಲಿಸಬೇಕು ಎಂಬ ಉಮೇದಿನಲ್ಲಿದ್ರು.
ಸರಿ.. 2011ರ ಫೆಬ್ರವರಿ 19ರಿಂದ ಏಪ್ರಿಲ್ 2ರವರೆಗೆ ನಡೆದ ಈ ವಿಶ್ವಕಪ್ ಟೂರ್ನಿ ಭಾರತೀಯರ ಹೃದಯ ಬಡಿತವಾಗಿತ್ತು. ಭಾರತದಲ್ಲಿ ಹಬ್ಬದ ಸಂಭ್ರಮದಂತೆ ಈ ವಿಶ್ವಕಪ್ ಟೂರ್ನಿಯನ್ನು ಆಚರಿಸಲಾಗಿತ್ತು. ಅಂದ ಮೇಲೆ ಟಿವಿ ಚಾನೆಗಳ ಸುದ್ದಿ ಮನೆಯ ವಾತಾವರಣ ಹೇಗಿರಬಹುದು ? ಟಿಆರ್‍ಪಿ ಲೆಕ್ಕಚಾರದ ಜೊತೆಗೆ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಲು ಭಾರತೀಯ ಮಾಧ್ಯಮಗಳು ಸಿದ್ಧಗೊಂಡಿದ್ದವು.
ಇದಕ್ಕೆ ಇನ್ನೊಂದು ಕಾರಣವೂ ಇತ್ತು. 2007ರ ಟಿ-ಟ್ವೆಂಟಿ ವಿಶ್ವಕಪ್ ಗೆಲುವಿನ ನಂತರ ಧೋನಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿತ್ತು. ಗೆಲುವಿನ ಓಟದಲ್ಲಿ ಮುಂದುವರಿಯುತ್ತಿದ್ದ ಟೀಮ್ ಇಂಡಿಯಾ ಶ್ರೇಷ್ಠ ಪ್ರದರ್ಶನ ನೀಡುತ್ತೆ ಅನ್ನೋ ವಿಶ್ವಾಸವಿತ್ತು. ಸಚಿನ್ ಪ್ರಭಾವದಷ್ಟೇ ಧೋನಿಯ ನಾಯಕತ್ವದ ಪ್ರಭಾವ ಕೂಡ ಹೆಚ್ಚು ಪ್ರಜ್ಚಲಿಸುತ್ತಿತ್ತು. ಹೀಗಾಗಿ ಧೋನಿ ಸುದ್ದಿ ಮನೆಯ ಕೇಂದ್ರ ಬಿಂದುವಾಗಿದ್ದರು.
ಅಷ್ಟೊತ್ತಿಗೆ ನನ್ನ ಮೂರುವರೆ ವರ್ಷದ ಟಿವಿ ನೈನ್ ಪಯಾಣ ಮುಗಿದು 2010ರಲ್ಲಿ ಸಮಯ ಟಿವಿಯ ಕ್ರೀಡಾ ವಿಭಾಗದ ಮುಖ್ಯಸ್ಥನಾಗಿ ಸೇರಿಕೊಂಡಿದ್ದೆ. ಜೀವನ್ ಅರಂತೋಡು, ದಾಮೋದರ್ ದೊಂಡೊಲೆ, ಪ್ರಶಾಂತ್ ಬಿ.ಆರ್. ಉಮೇಶ್, ಜೊತೆಗೆ ಪ್ರೊಡಕ್ಷನ್ ವಿಭಾಗದಲ್ಲಿ ಮಂಜುಳಾ ರೆಡ್ಡಿ ಹಾಗೂ ವಿಡಿಯೋ ಎಡಿಟರ್‍ಗಳಾಗಿ ನಟರಾಜ್ ಮತ್ತು ವಿಜಯಕಾಂತ್ ಕಿಣಿ ಅವರನ್ನೊಳಗೊಂಡ ಬಳಗವಿತ್ತು. ಆಗಲೇ ನಾವು 2010 ವಿಶ್ವಕಪ್ ಫುಟ್‍ಬಾಲ್ ಟೂರ್ನಿಯ ಸವಿ ಸವಿಯಾದ ಕಾರ್ಯಕ್ರಮದ ಹುರುಪು ಇತ್ತು.
2011ರ ಕ್ರಿಕೆಟ್ ಟೂರ್ನಿಯ ವೇಳೆ ಸಮಯ ವಾಹಿನಿಯಲ್ಲಿ ಮಹತ್ತರವಾದ ಬದಲಾವಣೆಗಳು ಆಗಿದ್ದವು. ಸಂಸ್ಥೆಯನ್ನು ಹುಟ್ಟು ಹಾಕಿದ್ದ ಸತೀಶ್ ಜಾರಕಿಹೊಳಿ ಅವರು ಮುರುಗೇಶ್ ನಿರಾಣಿಗೆ ಕೈಗೆ ನೀಡಿದ್ದರು. ಹಾಗೇ ಹೊಸ ಸಂಪಾದಕರಾಗಿ ಶಶಿಧರ್ ಭಟ್ ಸರ್ ಆಗಷ್ಟೇ ಅಧಿಕಾರ ಸ್ವೀಕರಿಸಿಕೊಂಡಿದ್ದರು. ಸುದ್ದಿ ಸಂಪಾದಕರಾದ ಎಮ್.ಆರ್. ಸುರೇಶ್ ಸರ್, ವಾಗೇಶ್ ಸರ್, ಲೂಯಿಸ್ ಸರ್, ಸುನೀಲ್ ಸಿರಸಂಗಿ, ನರೇಂದ್ರ ಮಡಿಕೇರಿ, ಕ್ರೈಮ್ ವಿಭಾಗದ ಮಂಜುನಾಥ್, ದಿ. ಮಂಜು ಹೊನ್ನಾವರ, ಪ್ರೊಡಕ್ಷನ್ ಚೀಫ್ ಮಹೇಶ್ ಸರ್, ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಆನಂದ್ ಪತ್ತರ್, ಆತ್ಮೀಯ ಗೆಳೆಯರಾಗಿದ್ದ ಲಿಂಗರಾಜು, ಮಂಜೇಶ್, ದಿ. ನಂದ ಕುಮಾರ್ ಮೊದಲಾದವರು ನಮಗೆ ಸಾಥ್ ನೀಡ್ತಾ ಇದ್ರು.
2011ರ ವಿಶ್ವಕಪ್ ಟೂರ್ನಿಯ ಪ್ಲಾನ್ ಹೇಗೆ ಎಂಬುದರ ಬಗ್ಗೆ ನಮ್ಮ ಬ್ಯೂರೋದಲ್ಲಿ ಮೊದಲು ಚರ್ಚೆ ನಡೆಯಿತ್ತು. ಒಬ್ಬರೊಬ್ಬರದ್ದು ಒಂದೊಂದು ಅಭಿಪ್ರಾಯ. ಕಡೆಗೆ ಮೂರು ನೇರ ಪ್ರಸಾರ ಕಾರ್ಯಕ್ರಮ ಹಾಗೂ ಬೆಳಗ್ಗೆ 8.30ರ ಗೇಮ್ ಪ್ಲಾನ್ ಕಾರ್ಯಕ್ರಮ ಸೇರಿ ಎರಡು ವಿಶೇಷ ಕಾರ್ಯಕ್ರಮ. ಅಗತ್ಯ ಬಿದ್ರೆ ಹೆಚ್ಚುವರಿಯಾಗಿ ಕಾರ್ಯಕ್ರಮ ಮಾಡೋಣ ಅಂತ ಪ್ಲಾನ್ ಎಲ್ಲಾ ರೆಡಿಯಾಗಿತ್ತು. ಇದಕ್ಕೆ ಸಂಪಾದಕರ ಒಪ್ಪಿಗೆಯೂ ಸಿಕ್ಕಿತ್ತು. ನೇರ ಪ್ರಸಾರದ ನಿರೂಪಕರಾಗಿ ಸುನೀಲ್ ಸಿರಂಸಗಿ, ಪ್ರಶಾಂತ್ ಬಿ.ಆರ್. ಹಾಗೂ ಕ್ರೀಡಾ ವಿಶ್ಲೇಷಕರಾಗಿ ಜೊಸೇಫ್ ಹೂವರ್, ಚಂದ್ರ ಮೌಳಿ ಕಣವಿ, ಸೋಮಶೇಖರ್ ಶಿರಗುಪ್ಪಿ, ಆನಂದ್ ಕಟ್ಟಿ ಹಾಗೂ ಎಮ್.ಸಿ. ಅಯ್ಯಪ್ಪ ಅವರು ಭಾಗಿಯಾಗಿದ್ದರು.
ಪಂದ್ಯ ಶುರುವಾಗುವುದಕ್ಕಿಂತ ಮುನ್ನ ಮಧ್ಯಾಹ್ನ, ಮೊದಲ ಇನಿಂಗ್ಸ್ ಮುಗಿದ ನಂತರ ಹಾಗೂ ರಾತ್ರಿ ಪಂದ್ಯ ಮುಗಿದ ಬಳಿಕ. ಹೀಗೆ ಪಂದ್ಯದ ವಿಶ್ಲೇಷಣೆಯ ಜೊತೆಗೆ ಕ್ರಿಕೆಟ್ ಅಭಿಮಾನಿಗಳ ಫೋನ್ ಇನ್ ಕಾರ್ಯಕ್ರಮ. ಕೆಲವೊಂದು ಬಾರಿ ಇದು ಮಧ್ಯರಾತ್ರಿ 1 ಗಂಟೆಯ ತನಕ ಮಾಡೋಣ ಅನ್ನೋದು ನಮ್ಮ ಪೂರ್ವ ನಿಯೋಜಿತ ಪ್ಲಾನ್ ಆಗಿತ್ತು.
ಹಾಗೇ ಪ್ರೊಮೋ ಹೇಗೆ ಮಾಡೋದು ಎಂದು ಅಂದುಕೊಂಡಾಗ ನೆನಪಾಗಿದ್ದು ಮಹಾಭಾರತದ ಕೃಷ್ಣಾರ್ಜುನ ಪರಿಕಲ್ಪನೆ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಅರ್ಜುನನಿಗೆ ಸಾರಥಿಯಾಗಿದ್ದ. ಹಾಗೇ ರನ್ ಭೂಮಿ ಪ್ರೊಮೋದಲ್ಲಿ ಅರ್ಜುನನಾಗಿ ನಾಯಕ ಧೋನಿ ಮತ್ತು ಸಾರಥಿಯಾಗಿ ಸಚಿನ್ ತೆಂಡುಲ್ಕರ್ ಅವರನ್ನು ಕಲಿಸಿಕೊಂಡು ಪ್ರೊಮೋ ಸಿದ್ಧವಾಯ್ತು. ಈ ಅದ್ಭುತ ಪ್ರೋಮೋದ ರೂವಾರಿ ಗ್ರಾಫಿಕ್ಸ್ ಹೆಡ್ ಆಗಿದ್ದ ಪ್ರಶಾಂತ್. ಹಾಗೇ ಅಕ್ಷಯ್ ಅವರು ಚೆಂದದ ಗ್ರಾಫಿಕ್ಸ್ ಪ್ಲೇಟ್‍ಗಳನ್ನು ಮಾಡಿಕೊಟ್ಟಿದ್ದರು. ಮತ್ತೊಂದೆಡೆ ಗ್ರಾಫಿಕ್ಸ್ ಕಲಿಯುತ್ತಲೇ ಮಹದೇವ್ ಪ್ರಸಾದ್ ತನ್ನ ಅದ್ಭುತ ಪರಿಕಲ್ಪನೆಯೊಂದಿಗೆ ರನ್‍ಭೂಮಿ ವಿಶೇಷ ಕಾರ್ಯಕ್ರದ ಸೆಟ್ ಡಿಸೈನ್ ಮಾಡಿದ್ದರು. ಇವರೊಂದಿಗೆ ಕ್ಯಾಮೆರಾ ವಿಭಾಗದಿಂದ ಮೋಹನ್, ಮುರಳಿ, ಮಹೇಶ್, ರಾಘವೇಂದ್ರ, ದೀಪಕ್ ಗೌಡ, ಕ್ಯಾಮೆರಾ ಅಸಿಸ್ಟೆಂಟ್ ಆಗಿ ಹರಿಪ್ರಸಾದ್ ಹೀಗೆ ಎಲ್ಲರು ಸಹಕಾರ ನೀಡಿದ್ದರು.
ದೇಶ್ ಕೀ ಧಡ್ಕನ್: ಇದು ಸಂಜೆ 7.30ಕ್ಕೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಕ್ರಿಕೆಟ್ ಚರಿತ್ರೆ, ವಿಶ್ವಕಪ್ ಸಾಧನೆ ಮತ್ತು ಆಟಗಾರರ ಬಲಾಬಲ ಹೇಗಿರುತ್ತೆ ಅನ್ನೋದರ ಬಗ್ಗೆ 24 ನಿಮಿಷಗಳ ಕಾರ್ಯಕ್ರಮ.
ರನ್ ಭೂಮಿ- ವಿಶ್ವಕಪ್ ಟೂರ್ನಿಯ ಮೂರು ನೇರ ಪ್ರಸಾರದ ಕಾರ್ಯಕ್ರಮ.. ಎಂದಿನಂತೆ ಪಂದ್ಯದ ವಿಶ್ಲೇಷಣೆ, ಅಂಕಿ ಅಂಶಗಳು, ಆಟಗಾರರ ಬಲಾಬಲ ಹಾಗೂ ಕ್ರಿಕೆಟ್ ಅಭಿಮಾನಿಗಳ ಅಭಿಮತ ಈ ಕಾರ್ಯಕ್ರಮದಲ್ಲಿತ್ತು.
ಗೇಮ್ ಪ್ಲಾನ್- ಬೆಳಗ್ಗೆ 8.30ಕ್ಕೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ. ಪಂದ್ಯದ ಫಲಿತಾಂಶ.. ಪಂದ್ಯಗಳ ಹೈಲೈಟ್ಸ್ ಜೊತೆಗೆ ಕ್ರಿಕೆಟ್ ಗೆ ಸಂಬಂಧಿಸಿದಂತೆ ದಾಖಲೆಗಳ ಪಟ್ಟಿಗಳು ಇರುತ್ತಿದ್ದವು.
ಇಲ್ಲಿ ನನಗೆ ಇನ್ನೂ ನೆನಪಿನಲ್ಲಿರುವುದು ನಮ್ಮ ಕ್ರೀಡಾ ತಂಡದ ಉತ್ಸಾಹ, ಆಸಕ್ತಿ ಮತ್ತು ಬದ್ಧತೆ.. ಜೀವನ್ ನ ಚುಟುಕಾದ ಸ್ಕ್ರಿಪ್ಟ್, ಪ್ರಶಾಂತ್‍ನ ಸಾಹಿತ್ಯದ ಪದಗಳ ಜೋಡಣೆ, ದಾಮೋದರನ ಹಾಸ್ಯ ಹಾಗೂ ಪದ ಪುಂಜಗಳ ವಾಖ್ಯಗಳ ಜೊತೆಗೆ ಸೊಗಸಾದ ಹಿನ್ನೆಲೆ ಧ್ವನಿ, ಎಲ್ಲಾ ಒತ್ತಡಗಳನ್ನು ನಿಭಾಯಿಸಿಕೊಂಡು, ಕೆಲವೊಂದು ಬಾರಿ ಬೈಸಿಕೊಂಡು ಕಾರ್ಯಕ್ರಮವನ್ನು ಸರಿಯಾದ ಸಮಯಕ್ಕೆ ಪ್ರಸಾರ ಮಾಡುವಂತೆ ಮಾಡುವಲ್ಲಿ ಮಂಜುಳ ರೆಡ್ಡಿ ಹಾಗೂ ನಟರಾಜ್ ಮತ್ತು ವಿಜಯಕಾಂತ್ ಕಿಣಿ ಅವರ ಶ್ರಮ ಎಲ್ಲವೂ ಅದ್ಭುತವಾಗಿತ್ತು. ಅದಕ್ಕೆ ತಕ್ಕಂತೆ ಡೆಸ್ಕ್ ವಿಭಾಗದಲ್ಲಿ ಪ್ರೀತಮ್, ಪ್ರಕಾಶ್, ಸಿದ್ದು, ರೂಪಾ ಹೆಗ್ಡೆ, ಭಾರತಿ ಭಟ್, ವಿನಾಯಕ ಲಿಮಿಯೆ, ಅಖಿಲಾ, ಸಾಗರ್, ಸಂಜಯ್, ಡೆಸ್ಕ್ ವಿಡಿಯೋ ಎಡಿಟರ್‍ಗಳಾಗಿದ್ದ ತೀರ್ಥ ಪ್ರಸಾದ್, ಚೇತನ್, ಅಶೋಕ್, ಉಮೇಶ್, ಪ್ರವೀಣ್, ಸಂದೇಶ್ ಹೀಗೆ ದೊಡ್ಡ ತಂಡವೇ ಈ ವಿಶ್ವಕಪ್ ಟೂರ್ನಿಯನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ್ದರು.
ಏಪ್ರಿಲ್ 2 2011 ಭಾರತ ಮತ್ತು ಶ್ರೀಲಂಕಾ ನಡುವಿನ ಫೈನಲ್ ಪಂದ್ಯ
2011ರ ಫೈನಲ್ ಪಂದ್ಯ. ಈ ಪಂದ್ಯವನ್ನು ನಮ್ಮ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದು ಮಹೇಂದ್ರ ಸಿಂಗ್ ಧೋನಿ. ಇದು ಹತ್ತು ವರ್ಷಗಳ ಹಿಂದೆ ನಡೆದಿರುವಂತಹ ಘಟನೆ. ಆದ್ರೆ ನಮಗೆ ಯಾಕೆ ಅಷ್ಟೊಂದು ನೆನಪಿನಲ್ಲಿದೆ ಎಂಬುದಕ್ಕೆ ಕಾರಣ..ಭಾರತ ಫೈನಲ್‍ಗೆ ಬಂದಿರೋದು. ಅದಕ್ಕೆ ಪ್ರಮುಖ ಕಾರಣ ಧೋನಿಯ ನಾಯಕತ್ವ. ಯುವರಾಜ್ ಸಿಂಗ್, ರೈನಾ, ಸೆಹ್ವಾಗ್, ನೆಹ್ರಾ, ಸಚಿನ್, ಸೆಹ್ವಾಗ್, ಗಂಭೀರ್ ಹೀಗೆ ಪ್ರತಿಯೊಬ್ಬರ ಕೊಡುಗೆ ಇದೆ. ಆದ್ರೆ ಇದ್ರ ಶ್ರೇಯ ಸಲ್ಲಿಕೆಯಾಗಿರುವುದು ಧೋನಿಗೆ ಮಾತ್ರ. ಧೋನಿಯಿಂದಾಗಿ ನಮ್ಮ ಸುದ್ದಿ ಮನೆಯನ್ನು ಜಾತ್ರೆಯಂತೆ ಮಾಡಲು ಸಾಧ್ಯವಾಯ್ತು, ಕ್ರಿಕೆಟ್ ಆಟ ಮಾತ್ರವಲ್ಲ..ಸುದ್ದಿ ಮಾತ್ರವಲ್ಲ. ಅದೊಂದು ಮನರಂಜನೆಯ ಕ್ರೀಡೆಯಾಗಿ ಬೆಳೆಯಲು ಕಾರಣ ಭಾರತೀಯ ಸುದ್ದಿ ಮನೆಗಳು ಎಂಬುದನ್ನು ಮರೆಯುವ ಹಾಗಿಲ್ಲ.
ಈ ನಡುವೆ ನಮ್ಮ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪಂದ್ಯಗಳನ್ನು ನೋಡುವ ಅವಕಾಶ ಕೂಡ ನಮಗೆ ಸಿಕ್ಕಿತ್ತು. ಆದ್ರೆ ಅಲ್ಲಿ ಒಬ್ಬರಿಗೆ ಮಾತ್ರ ಪ್ರವೇಶವಿರುತ್ತಿತ್ತು. ಜೊತೆಗೆ ಹೆಚ್ಚು ಕಾರ್ಯಕ್ರಮಗಳು ನಡೆಸುತ್ತಿದ್ದ ಕಾರಣ ಆಫೀಸ್‍ನಲ್ಲೇ ಟಿವಿಯಲ್ಲಿ ಪಂದ್ಯ ನೋಡಬೇಕಾಗಿತ್ತು. ಈ ನಡುವೆ ದಾಮೋದರ್, ಪ್ರಶಾಂತ್, ಜೀವನ್ ವಿಭಿನ್ನ ಐಡಿಯಾಗಳ ವರದಿಗಾರಿಕೆ ಕೂಡ ಇನ್ನೂ ಕಣ್ಣ ಮೇಲೆ ಹಾದು ಹೋಗುತ್ತದೆ. ನೀವು ನಂಬುತ್ತಿರೋ ಬಿಡ್ತಿರೋ.. ಕ್ರಿಕೆಟ್‍ಗೂ ಯಕ್ಷಗಾನದ ಟಚ್ ಕೊಟ್ಟಿದ್ದೇವು. ಆಗ ನಮ್ಮ ಸಮಯ ವಾಹಿನಿಯ ಉಡುಪಿ ವರದಿಗಾರನಾಗಿದ್ದ ದೀಪಕ್ ಜೈನ್ ಯಕ್ಷಗಾನ ಭಾಗವತಿಕೆಯ ಮೂಲಕ ಟೀಮ್ ಇಂಡಿಯಾಗೆ ಶುಭ ಹಾರೈಸುವಂತೆ ಮಾಡಿದ್ದರು. ಅದೇ ರೀತಿ ರ್ಯಾಪರ್ ಅಲೋಕ್ ಟೀಮ್, 1983ರ ವಿಶ್ವಕಪ್ ಹೀರೋ ಕಪಿಲ್ ದೇವ್ ಅವರ ಪೇಟಿಂಗ್ ಬಿಡಿಸಿದ್ದ ಮಾಂತ್ರಿಕ ವಿಲಾಸ್ ನಮ್ಮ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿದ್ರು. ಅದೇ ರೀತಿ ನಮ್ಮ ದಾಮು ಕನ್ನಡದ ಜನಪ್ರಿಯ ಗೀತೆಗಳಿಗೆ ಕ್ರಿಕೆಟ್ ಅಕ್ಷರಗಳನ್ನು ಪೋಣಿಸಿ ಬಡಕ್ಕಿಲ ಪ್ರದೀಪ್ ಕಂಠ ಸಿರಿಯಲ್ಲಿ ಹೊರಬಂದ ಕ್ರಿಕೆಟ್ ಗೀತೆಗಳ ರಿಮಿಕ್ಸ್ ಸರಮಾಲೆ ಇನ್ನೂ ನೆನಪಿನ ಪುಟದಲ್ಲಿದೆ.
ಕ್ರೀಡಾ ವಿಶ್ಲೇಷಕರ ಜೊತೆ ಸಿನಿ ತಾರೆಯರ ಸಂಗಮ.. ದಾಮೋದರ್‍ನ ಯಾರೂ ಊಹಿಸಲು ಸಾಧ್ಯವಿಲ್ಲದಂತಹ ಕ್ರಿಕೆಟ್ ಅಭಿಮಾನಿಗಳ ಹಾಗೂ ಪುಟಾಣಿಗಳ ಜೊತೆ ಪುಟಾಣಿಗಳಂತೆ ಆಗಿ ತೆಗೆದುಕೊಂಡಿರುವ ಬೈಟ್ಸ್‍ಗಳು.. ಹೋಮ, ಪೂಜೆ, ಮಸ್ತಿ ಡ್ಯಾನ್ಸ್‍ಗಳು ಹೀಗೆ ಸೊಗಸಾದ ಕಾರ್ಯಕ್ರಮಗಳನ್ನು ಮಾಡಿರುವಂತಹ ಸಾರ್ಥಕತೆ ಇದೆ. ಅದ್ರಲ್ಲೂ ಪೇಪರ್ ಹಾಸಿಕೊಂಡು ರಾತ್ರಿ ಪೂರ್ತಿ ಕಚೇರಿಯಲ್ಲಿ ಮಲಗಿದ್ದು, ರಾತ್ರಿ ಒಂದು ಗಂಟೆ ತನಕ ನೇರ ಪ್ರಸಾರದಲ್ಲಿ ಭಾಗಿಯಾಗಿದ್ದು, ಕೆಂಟಕಿ ಚಿಕನ್, ಕೆ.ಆರ್. ಮಾರ್ಕೆಟ್ ಎಗ್ ರೈಸ್, ಎಂಪೈರ್ ಹೊಟೇಲ್, ಎಲ್ಲವೂ ಈಗ ನೆನಪು ಅಷ್ಟೇ..
ಇನ್ನು ಫೈನಲ್ ಪಂದ್ಯ.. ಶ್ರೀಲಂಕಾ 6 ವಿಕೆಟ್‍ಗೆ 274 ರನ್ ಗಳನ್ನು ದಾಖಲಿಸಿತ್ತು. ಸವಾಲನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ಸೆಹ್ವಾಗ್ ಶೂನ್ಯ ಸುತ್ತಿದ್ರೆ, ಸಚಿನ್ ತೆಂಡುಲ್ಕರ್ 18 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಾಗ ಇಡೀ ಸಮಯ ಕಚೇರಿಯೇ ಸಪ್ಪೆ ಮೊಗದೊಂದಿಗೆ ತಮ್ಮ ಕೆಲಸಗಳನ್ನು ಮಾಡುತ್ತಿದ್ದರು. ಬಳಿಕ ಗಂಭೀರ್ ಮತ್ತು ವಿರಾಟ್ ಕೊಹ್ಲಿ (35) ತಂಡಕ್ಕೆ ಆಧಾರವಾದ್ರು. ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಭಾರತದ ಗೆಲುವಿನ ಆಸೆ ಕಮ್ಮಿಯಾಗುತ್ತಿದ್ದಂತೆ ಭಾಸವಾಗುತ್ತಿತ್ತು. ಆದ್ರೆ ಯಾವಾಗ ಧೋನಿ ಮುಂಬಡ್ತಿ ಪಡೆದು ಬ್ಯಾಟಿಂಗ್ ನಡೆಸಲು ಬಂದ ನಂತರ ನಿಧಾನವಾಗಿ ಗೆಲುವಿನ ಆಸೆ ಚಿಗುರಿತ್ತು. ಗಂಭೀರ್ 91 ರನ್ ಗಳಿಸಿ ಶತಕವಂಚಿತರಾದ್ರು. ಇನ್ನೊಂದೆಡೆ ಧೋನಿ ಅರ್ಧಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸುವುದರ ಜೊತೆಗೆ ಶತಕದತ್ತ ದಾಪುಗಾಲು ಹಾಕುತ್ತಿದ್ದರು. ಅಂತಿಮವಾಗಿ ಧೋನಿ ಅಜೇಯ 91 ರನ್ ಸಿಡಿಸಿದ್ರೆ, ಯುವರಾಜ್ ಸಿಂಗ್ ಅಜೇಯ 21 ರನ್ ಗಳಿಸಿದ್ದರು.
ಧೋನಿಯ ಗೆಲುವಿನ ಆ ಸಿಕ್ಸರ್ ಸಿಡಿದಾಗ ಸಮಯ ಕಚೇರಿಯಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಪಂದ್ಯ ಗೆಲುವಿನ ಹತ್ತಿರ ಸಮೀಪಿಸುತ್ತಿದ್ದಂತೆ ದಾಮು ಜೊತೆಗೆ ಮೆಟ್ರೋ ಮತ್ತು ಕ್ರೈಮ್ ವರದಿಗಾರರು ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಯಾವ ರೀತಿ ಅಭಿಮಾನಿಗಳು ಸಂಭ್ರಮಪಡುತ್ತಾರೆ ಎಂಬುದರ ದೃಶ್ಯಗಳನ್ನು ವೀಕ್ಷಕರಿಗೆ ತಲುಪುವಂತೆ ಮಾಡಿದ್ದರು. ಪರಶುರಾಮ್ ಅವರ ನೇತೃತ್ವದ ಪಿಸಿಆರ್ ಟೀಮ್ ಸಂಭ್ರಮದ ನಡುವೆ ತಮ್ಮ ಕೆಲಸಕ್ಕೆ ದಕ್ಕೆಯಾಗದಂತೆ ನೋಡಿಕೊಂಡಿದ್ದರು.
ಧೋನಿಯ ಸಿಕ್ಸರ್, ಟೀಮ್ ಇಂಡಿಯಾ ಹುಡುಗರ ಸಂಭ್ರಮ, ಸಚಿನ್ ಸ್ಪೇಷಲ್, ಯುವರಾಜ್ ಸಿಂಗ್, ಧೋನಿಯ ನಾಯಕತ್ವದ ಬಗ್ಗೆ ನಮ್ಮ ತಂಡದ ಹುಡುಗರು ಬರೆದಿರುವ ಸ್ಕ್ರಿಪ್ಟ್ ಗಳು ಅಬ್ಬಾ.. ಆ ಉತ್ಸಾಹ, ಆಸಕ್ತಿ, ಬದ್ಧತೆ ಎಲ್ಲವೂ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದೆ. ಧೋನಿ ನಿವೃತ್ತಿಯಾದಾಗ ಇದೆಲ್ಲಾ ಒಂದು ಬಾರಿ ನೆನಪಿನ ಪುಟದಲ್ಲಿ ಹಾದು ಹೋಯ್ತು. ಕಚೇರಿಯೇ ಮನೆ ಎಂದು ಅಂದುಕೊಂಡಿದ್ದ ನಾವೇನು ಅದ್ಭುತ ಅಂತ ಹೇಳುತ್ತಿಲ್ಲ. ಬೇರೆ ಬೇರೆ ಚಾನೆಲ್‍ಗಳಲ್ಲೂ ನಮ್ಮ ಸ್ನೇಹಿತರು ವಿಭಿನ್ನ ಕಾರ್ಯಕ್ರಮ ಮಾಡಿದ್ದಾರೆ. ಅವರಿಗೂ ಇದು ನೆನಪಿನಲ್ಲಿರುತ್ತದೆ. ಇದಕ್ಕಾಗಿಯೇ ನನಗೆ ಹೊಳೆದಿದ್ದು ಸುದ್ದಿ ಮನೆಯ ಸಂಭ್ರಮದ ಹರಿಕಾರ ಧೋನಿಯಲ್ವಾ ಅಂತ.
ಧನ್ಯವಾದಗಳು
ಸನತ್ ರೈ