ಐಪಿಎಲ್ ನ 32ನೇ ಪಂದ್ಯದಲ್ಲಿ ಲಕ್ನೋ ಹಾಗೂ ಚೆನ್ನೈ ತಂಡಗಳು ಪರಸ್ಪರ ಸೆಣಸಾಟ ನಡೆಸಿವೆ. ಈ ಪಂದ್ಯದಲ್ಲಿ ಬಿರುಗಾಳಿಯಂತೆ ಬ್ಯಾಟ್ ಬೀಸಿದ ಎಂ.ಎಸ್. ಧೋನಿ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಸಿಎಸ್ ಕೆ ಈ ಪಂದ್ಯದಲ್ಲಿ 176 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಲಕ್ನೋ 2 ವಿಕೆಟ್ ಕಳೆದುಕೊಂಡು ಒಂದು ಓವರ್ ಬಾಕಿ ಇರುವಂತೆ 180 ರನ್ ಗಳಿಸಿ ಗೆಲುವು ಸಾಧಿಸಿತು. ಚೆನ್ನೈ ಪರ ರವೀಂದ್ರ ಜಡೇಜಾ 57 ರನ್ ಗಳಿಸಿದರು. ಅಲ್ಲದೇ, ಮೊಯಿನ್ ಅಲಿ 30 ರನ್ ಸಿಡಿಸಿ ಮಿಂಚಿದರು. ಈ ಸಂದರ್ಭದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ ಧೋನಿ ಔಟ್ ಆಗದೆ ಕೇವಲ 9 ಬೌಲ್ ಗಳಲ್ಲಿ 28 ರನ್ ಗಳಿಸಿದ್ದಾರೆ. ಈ ಮೂಲಕ ದಾಖಲೆ ಬರೆದಿದ್ದಾರೆ.
ಕೇವಲ 9 ಎಸೆತ ಎದುರಿಸಿದ ಧೋನಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 28 ರನ್ ಗಳಿಸಿದ್ದಾರೆ. ಈ ಮೂಲಕ ಧೋನಿ ಐಪಿಎಲ್ ನಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೇ, ಎಬಿ ಡಿವಿಲಿಯರ್ಸ್ ದಾಖಲೆಯನ್ನೂ ಮುರಿದಿದ್ದಾರೆ. ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ 5162 ರನ್ ಗಳಿಸಿದ್ದರು. ಧೋನಿ ಈಗ 5169 ರನ್ ಗಳಿಸಿದ್ದಾರೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೂಡ ಧೋನಿ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.