ಕೊಪ್ಪಳ: ಮಾಜಿ ಸಚಿವ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆಯ ವೇಳೆಗೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhan Reddy) ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ದೀಪಾವಳಿಗೂ ಮುನ್ನವೇ ತಮ್ಮ ಕೆಆರ್ ಪಿಪಿ ಪಕ್ಷದ ಎಲ್ಲ ಘಟಕಗಳನ್ನು ಅವರು ವಿಸರ್ಜಿಸಿರುವುದು ಈ ರೀತಿಯ ಅನುಮಾನಕ್ಕೆ ಕಾರಣವಾಗುತ್ತಿದೆ. ಹೀಗಾಗಿಯೇ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಗಂಗಾವತಿಯಲ್ಲಿ ಕೇಳಿ ಬಂದಿವೆ.
ಬಿ.ವೈ ವಿಜಯೇಂದ್ರ (BY Vijayendra) ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದು, ಈ ಮಾತುಗಳಿಗೆ ಬಲ ಬಂದಿದೆ. ಜನಾರ್ದನ ರೆಡ್ಡಿ ಮೊದಲಿನಿಂದಲೂ ಯಡಿಯೂರಪ್ಪ ಅವರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಬದಲಾಗಿ ಅವರು ನನ್ನ ರಾಜಕೀಯ ಬೆಳವಣಿಗೆಗೆ ಕಾರಣರಾದವರು ಎಂದು ಹೇಳಿದ್ದರು. ಜನಾರ್ದನ ರೆಡ್ಡಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ವಿಜಯೇಂದ್ರ ಕೂಡ ಒಲವು ತೋರಿದ್ದರು ಎನ್ನಲಾಗುತ್ತಿದೆ.