Dinesh Karthik : ಆಗ ಬೆಸ್ಟ್ ಫಿನಿಷರ್ `ಧೋನಿ ಝೀರೋ’.. `ಡಿ.ಕೆ.ಸೂಪರ್ ಹೀರೋ’
ಡಿಸೆಂಬರ್ 1 2006. ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಮೊದಲ ಟಿ 20 ಅಂತರಾಷ್ಟ್ರೀಯ ಪಂದ್ಯ. ಜೋಹಾನ್ಸ್ ಬರ್ಗ್ ವೇದಿಕೆ.
ಟಾಸ್ ಗೆದ್ದ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆಫ್ರಿಕಾದ ಓಪನರ್ಸ್ ಗ್ರೆಮ್ ಸ್ಮಿತ್, ಲೂಟ್ಸ್ ಬೋಸ್ಮನ್ ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದರು.
ಬಳಿಕ ಟೀಂ ಇಂಡಿಯಾದ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಆಫ್ರಿಕಾ ತಂಡದ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಪರಿಣಾಮ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳನ್ನು ಪೇರಿಸಿತ್ತು. ಭಾರತದ ಪರ ಜಹೀರ್ ಖಾನ್, ಶ್ರೀಶಾಂತ್, ಅಜಿತ್ ಅಗಾರ್ಕರ್ ತಲಾ ಎರಡು ವಿಕೆಟ್ ಪಡೆದಿದ್ದರು. ಹರ್ಭಜನ್ ಸಿಂಹ್, ಸಚಿನ್ ತೆಂಡ್ಯೂಲ್ಕರ್ ತಲಾ ಒಂದು ವಿಕೆಟ್ ಪಡೆದಿದ್ದರು.
ಪಂದ್ಯ ಗೆಲ್ಲಲು 126 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ನಾಯಕ ವೀರೆಂದ್ರ ಸೆಹ್ವಾಗ್ 34 ರನ್ ಸಿಡಿಸಿ ಉತ್ತಮ ಆರಂಭ ನೀಡಿದರು.
ಸಚಿನ್ 10 ರನ್ ಗಳಿಗೆ ಔಟ್ ಆಗಿದ್ದರು. ಓನ್ ಡೌನ್ ನಲ್ಲಿ ಬಂದ ದಿನೇಶ್ ಮೊಂಗಿಯಾ 45 ಎಸೆತಗಳನ್ನು ಎದುರಿಸಿ 38 ರನ್ ಗಳಿಸಿದ್ದರು. ಇದರಿಂದ ಟೀಂ ಇಂಡಿಯಾಗೆ ರಿಕ್ವೇರ್ಡ್ ರೇಟ್ ಜಾಸ್ತಿಯಾಗಿತ್ತು.
ಇನ್ನು ಇದೇ ವೇಳೆ ಕ್ರೀಸ್ ಗೆ ಬಂದಿದ್ದ ಎಂ.ಎಸ್.ಧೋನಿ ಡಕೌಟ್ ಆದರು. ಇದರಿಂದ ಟೀಂ ಇಂಡಿಯಾದ ಪಾಳಯದಲ್ಲಿ ಸೋಲಿನ ಆತಂಕ ಮನೆ ಮಾಡಿತ್ತು.

ಈ ಸಂದರ್ಭದಲ್ಲಿ ನಾನಿದ್ದೀನಿ ಎಂದು ಕ್ರೀಸ್ ಗೆ ಬಂದ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾವನ್ನು ಧೂಳಿಪಟ ಮಾಡಿದರು. ಕೇವಲ 28 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಸುಮಾರು 16 ವರ್ಷಗಳ ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ ಸೇನೆ ಗೆಲುವು ಸಾಧಿಸಿತ್ತು. ಆ ದಿನೇಶ್ ಕಾರ್ತಿಕ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡಿದ್ದರು.
ಇನ್ನು ಇತ್ತೀಚೆಗಷ್ಟೆ ಮುಕ್ತಾಯಗೊಂದ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆಗಲೂ ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, ಬೆಸ್ಟ್ ಫಿನಿಷರ್ ಎಂದು ಸಾಭೀತು ಪಡಿಸಿದರು.
ಸದ್ಯ ಆರ್ ಸಿಬಿ ತಂಡದ ಭಾಗವಾಗಿರುವ ದಿನೇಶ್ ಕಾರ್ತಿಕ್, ದಕ್ಷಿಣ ಆಫ್ರಿಕಾದ ವಿರುದ್ಧ ಟಿ 20 ಸರಣಿಗೆ ಟೀಂ ಇಂಡಿಯಾಗೆ ಮೂರು ವರ್ಷಗಳ ಬಳಿಕ ಕಂ ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಡಿಕೆಗೆ ಆರ್ ಸಿಬಿ ವಿಷ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆರ್ ಸಿಬಿ ಪೋಸ್ಟ್ ವೈರಲ್ ಆಗುತ್ತಿದೆ.
ಭಾರತದ ಚೊಚ್ಚಲ ಟಿ 20 ಪಂದ್ಯದಲ್ಲಿ ಡಿಕೆ ಅದ್ಭುತ ಪ್ರದರ್ಶನದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಮೊದಲ ಟಿ 20 ಪಂದ್ಯ.. ಈ ಪಂದ್ಯದ ಗೆಲುವಿನಲ್ಲಿ ದಿನೇಶ್ ಕಾರ್ತಿಕ್ ಮ್ಯಾಚ್ ಆಫ್ ದಿ ಮ್ಯಾಚ್.. ಇದೀಗ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅದು ಪುನರಾವರ್ತನೆ ಆಗಲಿದೆ ಎಂದು ಅಂದಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.
ಇದನ್ನ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ವಾರೆ ವ್ಹಾ ಡಿಕೆ ನೀನು ಸೂಪರ್. ಅಂದಿನ ಮ್ಯಾಚ್ ನಲ್ಲಿ ಬೆಸ್ಟ್ ಫಿನಿಷರ್ ಧೋನಿ ಝೀರೋ.. ಈಗಿನ ಫಿನಿಷರ್ ಡಿಕೆ ಹೀರೋ.. ಡಿಕೆ ಆಲ್ ದ ಬೆಸ್ಟ್ ಎನ್ನುತ್ತಿದ್ದಾರೆ.








