ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ಸಾರಿಗೆ ವ್ಯವಸ್ಥೆ ಕುರಿತು ಚರ್ಚೆ
ವಿಧಾನಸಭೆಯ ಇಂದಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು. ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ, ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ವ್ಯವಸ್ಥೆ ಸುಧಾರಣೆ ಕುರಿತು ಪ್ರಸ್ತಾಪಿಸಿದರು. 9 ಲಕ್ಷ ಕಿಲೋ ಮೀಟರ್ ಸಂಚರಿಸಿದ ಬಸ್ ಗಳನ್ನು ಗುಜರಿಗೆ ಹಾಕಿ ಹೊಸ ಬಸ್ ಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ಬಿ ಶ್ರೀರಾಮುಲು, ಕಲ್ಯಾಣ ಕರ್ನಾಟಕ ಭಾಗದಲ್ಲಿ 4 ಸಾವಿರದ 28 ಬಸ್ ಷಡ್ಯೂಲ್ ಗಳು ಸಂಚರಿಸುತ್ತಿವೆ. 600 ಹೊಸ ಬಸ್ ಗಳನ್ನು ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಹೊಸ ಬಸ್ ಗಳು ಬಂದ ನಂತರ ಆ ಭಾಗಕ್ಕೆ ನಿಯೋಜಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಸಮಾಧಾನಗೊಳ್ಳದ ಈಶ್ವರ್ ಖಂಡ್ರೆ, ಒಂದು ಸಾವಿರಕ್ಕೂ ಹೆಚ್ಚು ಅವಧಿ ಮೀರಿದ ಹಳೆಯ ಬಸ್ ಗಳು ಸಂಚರಿಸುತ್ತಿದ್ದು, 600 ಬಸ್ ಗಳನ್ನು ಖರೀದಿಸಿದರೆ ಕಲ್ಯಾಣ ಕರ್ನಾಟಕ ಭಾಗದ ಬಸ್ ಗಳ ಸಮಸ್ಯೆ ಬಗೆಹರಿಯುವುದಿಲ್ಲ ಎಂದಾಗ, ಆ ಭಾಗದ ಇತರೆ ಸದಸ್ಯರು ಧ್ವನಿಗೂಡಿಸಿದರು.
ಬಳಿಕ ಶಾಸಕ ಲಿಂಬಣ್ಣನವರ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 2 ಸಾವಿರದ 814 ಚಾಲಕರ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ಹೆಚ್ಚುವರಿಯಾಗಿ ಚಾಲಕ ಕಮ್ ನಿರ್ವಾಹಕರನ್ನು ಸಹ ಅಗತ್ಯವಿದ್ದೆಡೆಗೆ ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.