ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಹಿನ್ನೆಲೆ ಆರೋಗ್ಯ ಸಚಿವರನ್ನು ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ನಾರಾಯಣಸ್ವಾಮಿ, “ಬಾಣಂತಿಯರಿಗೆ ನೀಡಿದ ಔಷಧಿ ಮತ್ತು ದ್ರಾವಣ ಕಳಪೆ ಗುಣಮಟ್ಟದ್ದಾಗಿದ್ದು, ಇದರಿಂದ ಹಲವರ ಜೀವ ಹೋಗಿರುವುದು ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿದೆ. ಇದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಜನರ ಜೀವಗಳ ಜೊತೆ ಆಟವಾಡುವಂತಹ ಘಟನೆಗಳು ಮರುಕಳಿಸಬಾರದು” ಎಂದು ಹೇಳಿದ್ದಾರೆ.
ಅವರು ಆರೋಗ್ಯ ಇಲಾಖೆಯಲ್ಲಿ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂಬಂಧ ಸರ್ಕಾರವೇನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.