ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಇದೀಗ ಹಾಲು ಹಾಗೂ ಸಹಕಾರ ಕ್ಷೇತ್ರದ ರಾಜಕಾರಣದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಬಮೂಲ್ (ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ) ಚುನಾವಣೆಗೆ ಅವರು ಸ್ಪರ್ಧೆ ಮಾಡುವುದಾಗಿ ದೃಢಪಡಿಸಿದ್ದಾರೆ.
ಬಮೂಲ್‌ನಿಂದ ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಗೆ ಪ್ರವೇಶ ಪಡೆದು ಅಧ್ಯಕ್ಷ ಸ್ಥಾನಕ್ಕೆ ಏರಲು ಡಿ.ಕೆ. ಸುರೇಶ್ ತಂತ್ರ ರೂಪಿಸುತ್ತಿದ್ದಾರೆ. ಈ ಮೂಲಕ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನದತ್ತ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ.
25 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುವ, 10 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರನ್ನು ಪ್ರತಿದಿನ ಸ್ಪರ್ಶಿಸುವ ಶಕ್ತಿಶಾಲಿ ಸಂಸ್ಥೆಯಾದ ಕೆಎಂಎಫ್ ಅಧ್ಯಕ್ಷ ಸ್ಥಾನವು ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಅತಿಪ್ರಭಾವಿ ಸ್ಥಾನಮಾನ ಹೊಂದಿದೆ.
ಶನಿವಾರ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಿದ್ದು, ಡಿಕೆ ಸುರೇಶ್ ತಮ್ಮ ಎಕ್ಸ್ ಖಾತೆಯಲ್ಲಿ ನಾಮಪತ್ರ ಸಲ್ಲಿಸುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕನಕಪುರ ತಾಲೂಕಿನ ಡೇರಿ ನಿರ್ದೇಶಕರ ಒತ್ತಡ ಮತ್ತು ಸ್ಥಳೀಯ ಬೆಂಬಲದ ಹಿನ್ನೆಲೆಯಲ್ಲಿ ಅವರು ಸ್ಪರ್ಧೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಹಾಲಿನ ರಾಜಕಾರಣದಲ್ಲಿಡಿ ಎಸ್ ಶಕೆ ಹೇಗಿರಲಿದೆ ಕಾದು ನೋಡಬೇಕಿದೆ.








