ಮೈಸೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕೆ.ಆರ್. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಜಮೀನಲ್ಲಿ ಕಲ್ಲು ಒಡೆಯೋಕೆ ಇವನ ಅನುಮತಿ ಕೇಳಬೇಕಾ? ಮಂಡ್ಯದಲ್ಲಿ ಕುಮಾರಸ್ವಾಮಿಯನ್ನು ಸೋಲಿಸಿ ವಾಪಾಸ್ ಚೆನ್ನಪಟ್ಟಣಕ್ಕೆ ಕಳುಹಿಸಿ. ಮಂಡ್ಯದಲ್ಲಿ ಸ್ಟಾರ್ ಚಂದ್ರು ಅಭ್ಯರ್ಥಿಯಲ್ಲ. ಸಿದ್ದರಾಮಯ್ಯ, ಡಿಕೆಶಿ ಎಂದು ಭಾವಿಸಿ ಮತ ಹಾಕಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಒಂದು ಜಾತಿ, ಧರ್ಮದ ಮೇಲೆ ನಿಂತಿಲ್ಲ. ಮೋದಿ 15 ಲಕ್ಷ ಹಣ ಹಾಕ್ತೇವೆ ಅಂದಿದ್ದರು. ಯಾರಿಗಾದರೂ ಬಂತಾ?, ಆದಾಯ ಡಬಲ್ ಆಯ್ತಾ ಅಥವಾ ಯುವಕರಿಗೆ ಸರ್ಕಾರಿ ಕೆಲಸ ಸಿಕ್ತಾ? ಆದರೂ ಜನರ ಮುಂದೆ ಬಂದು ಇವರು ಹೇಗೆ ಮತ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಭ್ರಷ್ಟಾಚಾರ ಹೊಗಲಾಡಿಸಬೇಕೆಂದು ಗ್ಯಾರಂಟಿ ಯೋಜನೆ ಜಾರಿಗೆ ತಂದರೆ, ಕುಮಾರಸ್ವಾಮಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಮಹಿಳೆಯರು ಕುಮಾರಸ್ವಾಮಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ನೀನು ಸಿಎಂ, ನಿಮ್ಮ ತಂದೆ ಪ್ರಧಾನಿ ಆಗಿ ಅಧಿಕಾರ ಅನುಭವಿಸಿದ್ದೀರಿ. ಆದರೂ ಈ ಅಧಿಕಾರ ದಾಹ ಏಕೆ? ನಿಮ್ಮಲ್ಲಿ ಕಾರ್ಯಕರ್ತರೇ ಇಲ್ಲವೇ ಎಂದು ಗುಡುಗಿದ್ದಾರೆ.