ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಡಿಸಿಎಂ ಡಿ.ಕೆ. ಶಿವಕುಮಾರ್ ನಿಗೂಢ ಚಟುವಟಿಕೆಯಿಂದ ಚರ್ಚೆಗೆ ಗ್ರಾಸವಾಗಿದ್ದಾರೆ. ಇತ್ತೀಚೆಗಷ್ಟೇ ಅವರು ತುಂಬಾ ರಹಸ್ಯವಾಗಿ ತುಮಕೂರು ಜಿಲ್ಲೆಯ ಪ್ರಸಿದ್ಧ ನವಿಲೆ ನಾಗೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿರುವುದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈ ಪೂಜೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡದಿದ್ದರೂ, ಡಿಕೆಶಿ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವುದರಿಂದ ಈ ಧಾರ್ಮಿಕ ಚಟುವಟಿಕೆ ಆ ಸ್ಥಾನವನ್ನು ಪಡೆಯಲು ಮಾಡುವ ಆಧ್ಯಾತ್ಮಿಕ ಯತ್ನವೆಂದು ವಿಶ್ಲೇಷಿಸುತ್ತಿದ್ದಾರೆ.
ದಿಲ್ಲಿ ಭೇಟಿ ಪೂರ್ವದಲ್ಲಿ ಈ ಭೇಟಿ ನಡೆದಿರುವುದು ಮತ್ತಷ್ಟು ಸಂಭ್ರಮಕ್ಕೆ ಎಡೆಮಾಡಿದೆ. ಕೆಲ ಮೂಲಗಳ ಪ್ರಕಾರ, ಈ ಪೂಜೆ ವೇಳೆ ಮಂತ್ರ-ತಂತ್ರದ ಆಚರಣೆಗಳು ನಡೆದಿದ್ದು, ಅದನ್ನು ಅತ್ಯಂತ ಸೀಮಿತ ಸಂಖ್ಯೆಯ ನಿಕಟವರ್ತಿಗಳೊಂದಿಗೆ ನಡೆಸಲಾಯಿತು ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ, ಸಚಿವ ರಾಜಣ್ಣ ಅವರು ಮತ್ತೊಮ್ಮೆ “ಸೆಪ್ಟೆಂಬರ್ ಕ್ರಾಂತಿ” ಎಂಬ ತಮ್ಮ ಹಿಂದಿನ ವಿವಾದಿತ ಹೇಳಿಕೆಯನ್ನು ಪುನರಾವರ್ತಿಸಿದ್ದು, ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆಯ ಮುನ್ಸೂಚನೆ ಕೊಟ್ಟಂತಾಗಿದೆ.
ರಾಜ್ಯ ರಾಜಕಾರಣದಲ್ಲಿ ಈಗ “ಡಿಕೆಶಿಯ ನಿಗೂಢ ಪೂಜೆ ಫಲಿಸುತ್ತದಾ? ಸಿಎಂ ಪಟ್ಟ ಲಭಿಸುತ್ತದಾ?” ಎಂಬ ಪ್ರಶ್ನೆಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ.








