ಬೆಂಗಳೂರು: ಸೇವೆ ಖಾಯಂಗೆ ಆಗ್ರಹಿಸಿ ಹೋರಾಟಕ್ಕೆ ಸಜ್ಜಾಗಿರುವ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ.
ಬೆಂಗಳೂರಿನ ಕುಮಾರಕೃಪಾ ಗೆಸ್ಟ್ ಹೌಸ್‍ನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿದ ಗುತ್ತಿಗೆ ವೈದ್ಯರು, ಸರ್ಕಾರದ ಭರವಸೆ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಸೇವೆ ಖಾಯಂಗೆ 15 ದಿನಗಳ ಗಡುವು ನೀಡಿದ್ದಾರೆ.
ರಾಮುಲು ಸಂಧಾನ ಯಶಸ್ವಿ
ಗುತ್ತಿಗೆ ವೈದ್ಯರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀರಾಮುಲು, ನಿಮ್ಮ ಸೇವೆ ಖಾಯಂ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿದ್ದಾರೆ. ನಿಯಮಗಳಲ್ಲಿ ಕೆಲ ಬದಲಾವಣೆ ತರಬೇಕಿದೆ. ಹೀಗಾಗಿ ಒಂದು ತಿಂಗಳು ಬೇಕಾಗುತ್ತದೆ. ಕೆಲಸಕ್ಕೆ ಹಾಜರಾಗುವಂತೆ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.

ಸಚಿವರ ಮನವಿಗೆ ಸ್ಪಂದಿಸಿದ ಗುತ್ತಿಗೆ ವೈದ್ಯರು ಕೆಲಸಕ್ಕೆ ಹಾಜರಾಗಲು ವೈದ್ಯರು ಒಪ್ಪಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಆದರೆ, ಸಚಿವರ ಭರವಸೆಗೆ ಒಪ್ಪಿದ ಗುತ್ತಿಗೆ ವೈದ್ಯರು, 15 ದಿನದೊಳಗೆ ನಮ್ಮ ಸೇವೆ ಖಾಯಂ ಮಾಡಬೇಕು. ಇಲ್ಲವಾದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದ ಎಂದು ಎಚ್ಚರಿಕೆ ನೀಡಿದ್ದಾರೆ.
ಸೇವೆ ಖಾಯಂಗೆ ಆಗ್ರಹಿಸಿ ಇಂದು ಕೆಲಸ ರಾಜೀನಾಮೆ ನೀಡಿ ಮುಷ್ಕರ ಆರಂಭಿಸಲು ಗುತ್ತಿಗೆ ವೈದ್ಯರು ನಿರ್ಧರಿಸಿದ್ದರು. ನಿನ್ನೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೈದ್ಯರ ಸೇವೆ ಖಾಯಂ ಮಾಡಲು ಸರ್ಕಾರ ನಿರ್ಧರಿಸಿತ್ತು. ಹೀಗಾಗಿ ವೈದ್ಯರು ತಮ್ಮ ಉದ್ದೇಶಿತ ಮುಷ್ಕರ ವಾಪಸ್ ಪಡೆದಿದ್ದರು.








