ಇನ್ನು ಮುಂದೆ ಭಾರತದಲ್ಲಿ ಹೆಣ್ಣು ಕತ್ತೆಗಳಿಗೆ ಭಾರೀ ಡಿಮ್ಯಾಂಡ್..! ಆರಂಭವಾಗಲಿದೆ ಕತ್ತೆಗಳ ಹಾಲಿನ ಡೈರಿ..!
ಹರಿಯಾಣ, ಅಗಸ್ಟ್ 11: ಹಾಲಿಗಾಗಿ ಕತ್ತೆಗಳ ಡೈರಿಯನ್ನು ತೆರೆಯಲು ಭಾರತ ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ ಹಸು, ಎಮ್ಮೆ ಮತ್ತು ಮೇಕೆ ಹಾಲು ಡೈರಿಗಳ ಸಾಲಿಗೆ ಹೊಸದಾಗಿ ಇದೀಗ ಕತ್ತೆಗಳ ಹಾಲಿನ ಡೈರಿ ಸೇರ್ಪಡೆಯಾಗಲಿದೆ.
ಹರಿಯಾಣದ ಹಿಸಾರ್‌ನಲ್ಲಿ ಈಕ್ವಿನ್ಸ್‌ನ ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಇ) ದಲ್ಲಿ ಶೀಘ್ರದಲ್ಲೇ ಕತ್ತೆ ಹಾಲಿನ ಡೈರಿಯನ್ನು ಪ್ರಾರಂಭಿಸಲಿದೆ. ಹಾಲಿನ ಡೈರಿಯನ್ನು ತೆರೆಯಲು ಎನ್‌ಆರ್‌ಸಿಇ ಹಿಸಾರ್‌ನಲ್ಲಿ ಈಗಾಗಲೇ ಪ್ರಸ್ತುತ ಸಂತಾನೋತ್ಪತ್ತಿ ನಡೆಸುತ್ತಿರುವ 10 ಹಲಾರಿ ತಳಿ ಕತ್ತೆಗಳಿನ್ನು ಸಾಕಲು ಆದೇಶಿಸಿದೆ. ಕತ್ತೆಯ ಈ ತಳಿ ಗುಜರಾತ್‌ನಲ್ಲಿ ಕಂಡುಬರುತ್ತದೆ ಮತ್ತು ಅದರ ಹಾಲನ್ನು ಔಷಧಿಗಳ ನಿಧಿ ಎಂದು ಪರಿಗಣಿಸಲಾಗುತ್ತದೆ. ಇದು ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಗಾಧವಾಗಿ ಹೆಚ್ಚಿಸುವುದರ ಜೊತೆಗೆ ಕ್ಯಾನ್ಸರ್, ಬೊಜ್ಜು, ಅಲರ್ಜಿ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.
ಹಲಾರಿ ತಳಿಯ ಕತ್ತೆಯ ಹಾಲು ಮಕ್ಕಳಿಗೆ ಯಾವುದೇ ಅಲರ್ಜಿಯನ್ನು ಉಂಟುಮಾಡುವುದಿಲ್ಲ ಎಂದು ವರದಿಗಳು ಹೇಳಿದ್ದು, ಆ್ಯಂಟಿ ಆಕ್ಸಿಡೆಂಟ್, ಆಂಟಿ ಏಜಿಂಗ್ ಅಂಶಗಳು ಕತ್ತೆಯ ಹಾಲಿನಲ್ಲಿ ಕಂಡುಬರುತ್ತವೆ ಎಂದಿದೆ.
ದುಬಾರಿ ಸೌಂದರ್ಯ ಉತ್ಪನ್ನಗಳನ್ನು ತಯಾರಿಸಲು ಬಳಸುವ ಈ ಕತ್ತೆ ಹಾಲನ್ನು ಪ್ರತಿ ಲೀಟರ್‌ಗೆ 2000 ರೂ.ನಿಂದ 7000 ರೂ.ವರೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸಾಬೂನು, ಲಿಪ್ ಬಾಮ್, ಬಾಡಿ ಲೋಷನ್ ಇತ್ಯಾದಿಗಳನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಸಾಮಾನ್ಯ ಕತ್ತೆಯ ಹಾಲಿನ ಬೆಲೆ 2000 ರೂಪಾಯಿಯಿಂದ ಪ್ರಾರಂಭವಾಗಿ ಕತ್ತೆಯ ತಳಿಗಳ ಆಧಾರದ ಮೇಲೆ ಹಾಲಿನ ದರವು ಏಳು ಸಾವಿರ ರೂಪಾಯಿಗಳ ವರೆಗೆ ಇದೆ.