ಬೆಂಗಳೂರು : ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಕವಾಗಿದ್ದು, ಈ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಆಗ್ರಹಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದೇವೇಗೌಡರು, ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ರೈತರ, ಕಾರ್ಮಿಕರ ವಿರೋಧಿ ತಿದ್ದುಪಡಿ ಗಳನ್ನು ತಂದು ಸುಗ್ರೀವಾಜ್ಞೆ ಮೂಲಕ ರೈತರನ್ನು ಮತ್ತು ಕಾರ್ಮಿಕರನ್ನು ಬೀದಿ ಪಾಲು ಮಾಡಿದೆ. ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಿದ್ದು, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಬಹುಮತ ಇದೆ ಎಂದು ಏನು ಬೇಕಾದರೂ ಮಾಡಬಹುದು ಅನ್ನುವ ಮನಸ್ಥಿತಿಯಲ್ಲಿ ಸರ್ಕಾರವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ವಿರೋಧ ಪಕ್ಷಗಳ ಜೊತೆ ಚರ್ಚೆ ಮಾಡಬೇಕಿತ್ತು. ಆದ್ರೆ ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ. ಸರ್ಕಾರದ ಈ ಧೋರಣೆ ವಿರುದ್ಧ ರಾಜ್ಯಾದ್ಯಂತ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.








