ಧರ್ಮಸ್ಥಳ: ಧರ್ಮಸ್ಥಳದ ಸನಿಹದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಗಂಭೀರ ಆರೋಪದ ತನಿಖೆ ನಡೆಸುತ್ತಿರುವ ಸರ್ಕಾರದ ವಿಶೇಷ ತನಿಖಾ ದಳ (ಎಸ್‌ಐಟಿ) ಗೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಕೃತಜ್ಞತೆ ಸಲ್ಲಿಸಿದ್ದಾರೆ. “ಎಸ್‌ಐಟಿ ತನಿಖೆಯಿಂದ ಸತ್ಯಾಂಶ ಹೊರಬರುತ್ತಿದೆ. ಇದರಿಂದ ನಮ್ಮ ಮನಸ್ಸು ಹಗುರಾಗಿದೆ,” ಎಂದು ಹೇಳಿದ ಅವರು, “ಇಷ್ಟೆಲ್ಲಾ ವರ್ಷಗಳಿಂದ ನಾವು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಮೇಲೆ ಇಷ್ಟೊಂದು ದ್ವೇಷ ಮತ್ತು ಅಪವಾದಗಳು ಯಾಕೆ ಬರುತ್ತಿವೆ ಎಂಬುದು ನನಗೆ ಇವತ್ತಿಗೂ ಅರ್ಥವಾಗುತ್ತಿಲ್ಲ,” ಎಂದು ಭಾವುಕರಾಗಿ ನುಡಿದರು.
“ಶತ್ರುತ್ವ ಯಾಕೆ ಬಂತು ಎಂದು ತಿಳಿದಿಲ್ಲ”
ಕೋವಿಡ್ ನಂತರದ ದಿನಗಳಲ್ಲಿ ತಾವು ಅನೇಕ ಪುಸ್ತಕಗಳನ್ನು, ವಿಶೇಷವಾಗಿ ಸಿದ್ದಗಂಗಾ ಶ್ರೀಗಳ ಬೋಧನೆಗಳನ್ನು ಓದುತ್ತಿರುವುದಾಗಿ ತಿಳಿಸಿದ ಹೆಗ್ಗಡೆಯವರು, “ಸಿದ್ದಗಂಗಾ ಶ್ರೀಗಳು 108 ವರ್ಷಗಳ ಕಾಲ ಬದುಕಿ, ‘ಸೇವೆ ಮತ್ತು ಧರ್ಮವೇ ನಮಗೆ ಮುಖ್ಯ’ ಎಂದು ಸಾರಿದ್ದರು. ನಾವು ಅದೇ ಹಾದಿಯಲ್ಲಿ ನಡೆಯುತ್ತಿದ್ದೇವೆ. ನಮ್ಮ ಸೇವೆ ಪ್ರಚಾರದ ವಸ್ತುವಲ್ಲ. ಹೀಗಿದ್ದರೂ, ಈ ಶತ್ರುತ್ವ, ಈ ಹಗೆತನ ಎಲ್ಲಿಂದ ಬಂತು ಎಂದು ನಮಗೆ ತಿಳಿದಿಲ್ಲ. ನಾವು ಯಾರನ್ನೂ ಹೀಯಾಳಿಸಿಲ್ಲ, ದ್ವೇಷಿಸಿಲ್ಲ,” ಎಂದು ತಮ್ಮ ನೋವನ್ನು ತೋಡಿಕೊಂಡರು.
“ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತಂತೆ”
ಈ ಕಷ್ಟದ ಸಮಯದಲ್ಲಿ ನಮ್ಮ ಮೇಲೆ ದೃಢವಾದ ನಂಬಿಕೆಯಿಟ್ಟ ಲಕ್ಷಾಂತರ ಭಕ್ತರಿಗೆ ತಾವು ಆಭಾರಿ ಎಂದು ಹೆಗ್ಗಡೆಯವರು ತಿಳಿಸಿದರು. “ಭಕ್ತರು ಬಂದು, ‘ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ’ ಎಂದು ಹೇಳಿದಾಗ ನಮಗೆ ಧೈರ್ಯ ಬಂತು. ನಾವು ಯಾವುದೇ ತಪ್ಪು ಮಾಡಿಲ್ಲ ಎಂಬ ಆತ್ಮವಿಶ್ವಾಸ ನಮಗಿದೆ. ಬೆಂಗಳೂರಿನಲ್ಲೋ ಅಥವಾ ಬೇರೆಲ್ಲೋ ಕುಳಿತು ಟೀಕೆ ಮಾಡುವವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಜೊತೆ ನಿಲ್ಲುವ ನಮ್ಮವರೇ ನಮಗೆ ಬೇಕು,” ಎಂದು ಅವರು ಸ್ಪಷ್ಟಪಡಿಸಿದರು. ವಿಶೇಷವಾಗಿ ತಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಮಹಿಳೆಯರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
“ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರುತ್ತಿದೆ, ನಮ್ಮ ಹೊಳಪು ಹಾಗೇ ಉಳಿದಿದೆ”
ಎಸ್‌ಐಟಿ ವರದಿಯ ಅರ್ಧ ಭಾಗ ಬಂದಿರುವುದರಿಂದಲೇ ನಾನು ಇಷ್ಟು ಧೈರ್ಯವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿದ ಡಾ. ಹೆಗ್ಗಡೆಯವರು, “ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಎಸ್‌ಐಟಿ ರಚಿಸಿದ್ದರಿಂದ ಸತ್ಯ ಹೊರಬರುತ್ತಿದೆ. ಇದರಿಂದ ನಮ್ಮ ಸಂಸ್ಥೆಯ ಹೊಳಪು ಹಾಗೆಯೇ ಉಳಿದಿದೆ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿ ಮುಂದಿನದ್ದನ್ನು ನೋಡಿಕೊಳ್ಳುತ್ತಾರೆ. ನಾವು ಸತ್ಯದ ಹಾದಿಯಲ್ಲಿ ನಿಂತಿದ್ದೇವೆ ಮತ್ತು ಮುಂದೆಯೂ ಹಾಗೆಯೇ ಇರುತ್ತೇವೆ. ಮುಂದಿನ ದಿನಗಳು ಎಲ್ಲರಿಗೂ ಉತ್ತಮವಾಗಿರಲಿ,” ಎಂದು ಹಾರೈಸಿದರು.
ಈ ಪ್ರಕರಣದಲ್ಲಿ ಧರ್ಮಸ್ಥಳದ ಮೇಲೆ ನಡೆದ ದಬ್ಬಾಳಿಕೆಯನ್ನು ನೀವು ಕಣ್ಣಾರೆ ಕಂಡಿದ್ದೀರಿ ಎಂದು ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಅವರು, “ಯಾಕೆ ನನ್ನ ಮೇಲೆ ಇಷ್ಟು ದ್ವೇಷವೆಂದು ತಿಳಿದಿಲ್ಲ, ಆದರೆ ಈಗ ಮನಸ್ಸು ಹಗುರವಾಗಿದೆ. ಎತ್ತರದ ಬೆಟ್ಟದಿಂದ ನೀರು ಸರಾಗವಾಗಿ ಹರಿದಂತೆ ಭಾಸವಾಗುತ್ತಿದೆ,” ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.








