ಬೆಂಗಳೂರು ನೋಡಿದ್ರೆ ನನಗೂ ಭಯ ಆಗುತ್ತೆ : ಸುಧಾಕರ್
ಬೆಂಗಳೂರು : ನಗರ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು. ಬೆಂಗಳೂರು ನೋಡಿದ್ರೆ ನನಗೂ ಭಯ ಆಗುತ್ತೆ. ಸ್ವಲ್ಪ ಎಚ್ಚರ ತಪ್ಪಿದ್ರು ಆಪಾಯ ಗ್ಯಾರಂಟಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸೋಮವಾರದಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರದಿಂದ ಕೆಲ ಜಿಲ್ಲೆಗಳು ಹಾಗೂ ಕೆಲ ವಲಯಗಳಿಗೆ ಅನ್ ಲಾಕ್ ಘೋಷಣೆ ಮಾಡಲಾಗಿದೆ. ಆದ್ರೆ ಒಂದು ವೇಳೆ ಅನ್ ಲಾಕ್ ನಿಂದ ಸೋಂಕು ಹೆಚ್ಚಳ ಆದ್ರೆ ಮತ್ತೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ಕೊಡಲಾಗಿದೆ. ಅನ್ ಲಾಕ್ ಮಾಡಿದರು ಜನರು ಎಚ್ಚರಿಕೆಯಿಂದ ಇರಬೇಕು. ಎರಡು ಡೋಸ್ ಲಸಿಕೆ ಪಡೆಯೋವರೆಗೂ ಜನ ಎಚ್ಚರವಾಗಿ ಇರಬೇಕು. ರಾಜ್ಯದಲ್ಲಿ ಕನಿಷ್ಟ ಶೇ.70 ಜನರಿಗೆ ಲಸಿಕೆ ಕಂಪ್ಲೀಟ್ ಆದ ಮೇಲೆ ನಾವು ಮೊದಲಿನಂತೆ ಆರಾಮಾಗಿ ಇರಬಹುದು. ಲಸಿಕೆ ಹಾಕಿಸಿಕೊಳ್ಳೋವರೆಗೂ ಯಾರೂ ಮೈ ಮರೆಯಬೇಡಿ ಎಂದು ಸಚಿವರು ಮನವಿ ಮಾಡಿದರು.
ಇನ್ನು ರಾಜ್ಯದಲ್ಲಿ ಆರ್ಥಿಕ ನಷ್ಟ ಆಗಿದ್ದು, ಹೀಗಾಗಿ ಕೆಲ ವಿನಾಯ್ತಿ ಕೊಡಲಾಗಿದೆ. ಅಳೆದು ತೂಗಿ ನಿರ್ಧಾರ ಮಾಡಿದ್ದೇವೆ. ಶೇ.10ಕ್ಕಿಂತ ಹೆಚ್ಚು ಸೋಂಕು ಇರೋ ಜಿಲ್ಲೆಗಳು ಗಂಭೀರವಾಗಿ ಪರಿಗಣಿಸಬೇಕು. ಶೇ.5 ಒಳಗೆ ಸೋಂಕು ಇರೋ ಜಿಲ್ಲೆಗಳು ಎಚ್ಚರ ತಪ್ಪಬಾರದು. ಹೆಚ್ಚು ಹೆಚ್ಚು ಟೆಸ್ಟ್ ಗಳನ್ನು ಮಾಡಲು ಕ್ರಮವಹಿಸಬೇಕು. ಅಂತರ್ ರಾಜ್ಯ, ಹೊರ ದೇಶದಿಂದ ಬರೋರಿಗೆ ಚೆಕ್ ಪಾಯಿಂಟ್ ಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಆಗಬೇಕು ಎಂದು ತಿಳಿಸಿದರು.
ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಎಚ್ಚರವಹಿಸಬೇಕು. ಒಂದು ಗ್ರಾಮದಲ್ಲಿ 5 ಸೋಂಕಿತರು ಕಂಡು ಬಂದರೇ ಅ ಗ್ರಾಮವನ್ನೆ ಸೀಲ್ ಡೌನ್ ಮಾಡಬೇಕು ಎಂದು ತಿಳಿಸಿದ ಸುಧಾಕರ್, ನಗರ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು. ಬೆಂಗಳೂರು ನೋಡಿದ್ರೆ ನನಗೂ ಭಯ ಆಗುತ್ತೆ. ಸ್ವಲ್ಪ ಎಚ್ಚರ ತಪ್ಪಿದ್ರು ಆಪಾಯ ಗ್ಯಾರಂಟಿ. ಜನರು ಎಚ್ಚರಿಕೆಯಿಂದ ಇರಬೇಕು ಅಂತ ಮನವಿ ಮಾಡಿದರು.