ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಎಸಗಿರುವ ಸಾಲು ಸಾಲು ಅಕ್ರಮಗಳ ಬೆನ್ನಲ್ಲೇ ಕೇಂದ್ರ ಸರ್ಕಾರವು ನಂದನ್ ನಿಲೇಕಣಿ ನೇತೃತ್ವದಲ್ಲಿ ನೂತನ ಕಾರ್ಯಪಡೆ ರಚಿಸಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಟೀಕಿಸಿದೆ. ಹಳೆಯ ಸಮಿತಿಗಳ ಶಿಫಾರಸುಗಳನ್ನೇ ಜಾರಿ ಮಾಡದ ಸರ್ಕಾರ, ಈಗ ಹೊಸ ಸಮಿತಿ ರಚಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಕಿಡಿಕಾರಿದೆ.
ಹಳೆಯ ಶಿಫಾರಸುಗಳು ಕಸದ ಬುಟ್ಟಿಗೆ
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈ ಹಿಂದೆ ಕೆ ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿದ್ದ ಶಿಫಾರಸುಗಳ ಬಗ್ಗೆ ಪ್ರಶ್ನಿಸಿದ್ದಾರೆ. ಆ ಸಮಿತಿಯು ಒಟ್ಟು 101 ಮಹತ್ವದ ಶಿಫಾರಸುಗಳನ್ನು ನೀಡಿತ್ತು. ಅದರಲ್ಲಿ 60 ಶಿಫಾರಸುಗಳನ್ನು ತಕ್ಷಣವೇ ಜಾರಿಗೆ ತರಬೇಕಿತ್ತು ಮತ್ತು 30 ಸಲಹೆಗಳನ್ನು ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕಿತ್ತು. ಆದರೆ ಮೋದಿ ಸರ್ಕಾರ ಈ ವರದಿಗಳನ್ನು ಕಸದ ಬುಟ್ಟಿಗೆ ಹಾಕಿದೆ. ಹೀಗಿರುವಾಗ ಯಾವ ಮುಖ ಇಟ್ಟುಕೊಂಡು ಈಗ ನಂದನ್ ನಿಲೇಕಣಿ ನೇತೃತ್ವದಲ್ಲಿ ಹೊಸ ಕಾರ್ಯಪಡೆ ರಚಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೊಟ್ಟ ಮಾತು ತಪ್ಪಿದ ಕೇಂದ್ರ ಸರ್ಕಾರ
ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು 2024ರ ಡಿಸೆಂಬರ್ನಲ್ಲಿ ಒಂದು ಘೋಷಣೆ ಮಾಡಿದ್ದರು. ಸಮಿತಿಯ ಶಿಫಾರಸಿನಂತೆ ಎನ್ಟಿಎ ಇನ್ನು ಮುಂದೆ ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದರು. ಆದರೆ ವಾಸ್ತವದಲ್ಲಿ 2025 ರಿಂದ 2026ರ ಅವಧಿಯಲ್ಲಿ ಎನ್ಟಿಎ ಹಲವು ನೇಮಕಾತಿ ಪರೀಕ್ಷೆಗಳನ್ನು ನಡೆಸಿದೆ. ಸರ್ಕಾರದ ಮಾತಿಗೆ ಮತ್ತು ಕೃತಿಗೆ ಯಾವುದೇ ಸಂಬಂಧವಿಲ್ಲದಂತಾಗಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಎನ್ಟಿಎ ಸಂಸ್ಥೆಗೆ ಇಂದಿಗೂ ಒಬ್ಬ ಪೂರ್ಣಾವಧಿ ಮಹಾನಿರ್ದೇಶಕರನ್ನು ನೇಮಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಮರ್ಪಕ ನಾಯಕತ್ವವಿಲ್ಲದೆ ಸಂಸ್ಥೆಯು ಹಳ್ಳ ಹಿಡಿಯುತ್ತಿದೆ. ಸುಧಾರಣೆಗಳ ಹೆಸರಿನಲ್ಲಿ ಕೇವಲ ಸಮಿತಿಗಳನ್ನು ರಚಿಸುವ ಮೂಲಕ ಕಾಲಹರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕೇಂದ್ರ ಸರ್ಕಾರ, ಮೊದಲು ಹಳೆಯ ಶಿಫಾರಸುಗಳನ್ನು ಜಾರಿ ಮಾಡಲಿ ಎಂದು ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.








