ಬೆಂಗಳೂರು, ಮೇ 22 ; ಉಭಯ ಗಾನ ವಿದುಷಿ ಡಾ.ಶ್ಯಾಮಲಾ ಜಿ ಭಾವೆ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕಳೆದ ವಾರವಷ್ಟೆ ಅವರನ್ನು ಮನೆಗೆ ಕರೆತರಲಾಗಿತ್ತು. ಇಂದು ಮುಂಜಾನೆ 6.30ರ ಸುಮಾರಿಗೆ ಅವರು ಇಹಲೋಕ ತ್ಯಜಿಸಿದ್ದು, ಇವರ ಅಂತ್ಯಕ್ರಿಯೆಯನ್ನು ಚಾಮರಾಜಪೇಟೆ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ -19 ಶಿಷ್ಟಾಚಾರದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕಟುಂಬದ ಮೂಲಗಳು ತಿಳಿಸಿವೆ.
ಇನ್ನು ಶ್ಯಾಮಾಲಾ ಅವರು ಕರ್ನಾಟಕ ಸಂಗೀತ, ಹಿಂದೂಸ್ಥಾನಿ, ಸುಗಮ ಸಂಗೀತ, ಭಜನೆ ಮುಂತಾದ ಸಂಗೀತ ಪ್ರಾಕಾರಗಳಲ್ಲಿ ಅತ್ಯದ್ಭುತ ಗಾಯಕರಾಗಿದ್ದರು. ಸಂಗೀತ ಸಂಯೋಜನೆಯಲ್ಲದೆ, ಉಭಯ ಗಾಯನ ವಿಶಾರದೆಯಾಗಿದ್ದರು.
1941ರಲ್ಲಿ ಜನಿಸಿದ ಶ್ಯಾಮಲಾ ಅವರು ಮೂರನೇ ವಯಸ್ಸಿನಲ್ಲಿ ಸಂಗೀತ ಕಲಿಕೆ ಪ್ರಾರಂಭಿಸಿ, 6ನೇ ವಯಸ್ಸಿನಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 12ನೇ ವಯಸ್ಸಿನಲ್ಲಿ ಸಾರ್ವಜನಿಕ ಸಂಗೀತ ಕಛೇರಿ ನಡೆಸಿಕೊಟ್ಟ ಖ್ಯಾತಿ ಶ್ಯಾಮಲಾ ಜಿ ಭಾವೆ ಅವರಿಗೆ ಸಲ್ಲುತ್ತದೆ.
ತಂದೆ-ತಾಯಿಯರಿ0ದ ಹಿಂದೂಸ್ಥಾನಿ ಸಂಗೀತವನ್ನು , ಬಿ.ದೊರೆಸ್ವಾಮಿ ಹಾಗೂ ಎ.ಸುಬ್ಬರಾಯ್ ಅವರಿಂದ ಕರ್ನಾಟಕ ಸಂಗೀತದ ತಾಲೀಮು ಪಡೆದು ಉಭಯ ಗಾಯ ವಿದುಷಿಯಾಗಿ ಖ್ಯಾತಿ ಗಳಿಸಿದರು. ಶ್ಯಾಮಲಾ ಜಿ ಭಾವೆ ಅವರು ಸತತವಾಗಿ 73 ವರ್ಷಗಳ ಕಾಲ ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದರು. ಇನ್ನು ಶ್ಯಾಮಲಾ ಅವರ ನಿಧನಕ್ಕೆ ಗಣ್ಯರು ಮಿಡಿದಿದ್ದಾರೆ.








