ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೊ ರೈಲು ಸಂಚರಿಸಲಿದೆ. ಯೋಜನೆಗೆ ಬಿಎಂಆರ್ಸಿಎಲ್ ಇದೇ ವರ್ಷದ ಕೊನೆಯಲ್ಲಿ ಚಾಲನೆ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕಾಗಿ ಸಿದ್ದತೆಗಳನ್ನು ನಮ್ಮ ಮೆಟ್ರೊ ಮಾಡಿಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ.
ದೆಹಲಿಯಲ್ಲಿ ಚಾಲಕರಹಿತ ಮೆಟ್ರೊಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆ ಬಳಿಕ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಚಾಲಕರಹಿತ ಮೆಟ್ರೊ ಸಂಚರಿಸುತ್ತಿದೆ. ಮುಂದಿನ ತಿಂಗಳು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮುಂದಿನ ತಿಂಗಳು ಚಾಲಕರಹಿತ ಮೆಟ್ರೊ ಓಡಾಡಲಿದೆ ಎಂದು ವರದಿಯಾಗಿದೆ.
ಈ ಮೆಟ್ರೊ ಕಾರಿಡಾರ್ ಕಳೆದ ವರ್ಷವೇ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಕಾಮಗಾರಿಗಳು ವಿಳಂಬಗೊಂಡಿವೆ. ಈ ವರ್ಷದ ಕೊನೆಯಲ್ಲಿ ಆರಂಭಗೊಳ್ಳಲಿರುವ ಕಾರಿಡಾರ್ನಲ್ಲಿ ಚಾಲಕರಹಿತ ಮೆಟ್ರೊವನ್ನು ಓಡಿಸಲು ಬಿಎಂಆರ್ಸಿಎಲ್ ಮುಂದಾಗಿದೆ.
ಚಾಲಕ ರಹಿತ ರೈಲುಗಳಿಗೆ ಅನುಮತಿ ನೀಡಲು 2020 ರ ಮೆಟ್ರೋ ರೈಲ್ವೆ ಸಾಮಾನ್ಯ ನಿಯಮಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಕೊಚ್ಚಿ ಮತ್ತು ನಾಗ್ಪುರದಂತಹ ಹೊಸ ಮೆಟ್ರೋ ನೆಟ್ವರ್ಕ್ಗಳಲ್ಲಿ CBTC ಸಿಗ್ನಲಿಂಗ್ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಲಾಗಿದೆ. ಹಳದಿ ರೇಖೆಗೆ CBTC ತಂತ್ರಜ್ಞಾನವನ್ನು ಒದಗಿಸಲು ಸೀಮೆನ್ಸ್ ಒಪ್ಪಂದ ಮಾಡಿಕೊಂಡಿದೆ.
ಎಲೆಕ್ಟ್ರಾನಿಕ್ಸ್ ಸಿಟಿ, ಗೊಟ್ಟೆಗೆರೆ, ನಾಗವಾರ, ಸಿಲ್ಕ್ಬೋರ್ಡ್ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಹೊಸ ಸ್ವತಂತ್ರ ಮಾರ್ಗಗಳನ್ನು ಮೊದಲಿನಿಂದಲೂ CBTC ವ್ಯವಸ್ಥೆಗಾಗಿ ವಿನ್ಯಾಸಗೊಳಿಸಲಾಗಿದೆ. ಚಾಲಕರಹಿತ ಮೆಟ್ರೊ ರೈಲು ಆರಂಭವಾದ ನಂತರ ಅಲ್ಲಿ ಚಾಲಕ ಇರುವುದಿಲ್ಲ. ಕೇವಲ ಅಟೆಂಡರ್ ಹಾಜರಿರುತ್ತಾರೆ. ತುರ್ತು ಸಂದರ್ಭದಲ್ಲಿ ಅಟೆಂಡರ್ ಕಾರ್ಯಚರಣೆಗೆ ಇಳಿಯುತ್ತಾರೆ.