ಕೇಂದ್ರ ಸರ್ಕಾರದ ಮಾನದಂಡದಂತೆ 120 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು, ಬುಧವಾರದಿಂದ 10 ದಿನಗಳ ಕಾಲ ಜಂಟಿ ಸಮೀಕ್ಷೆ ನಡೆಯಲಿದೆ. ಆ ವರದಿ ಆಧರಿಸಿ ಬರ ಘೋಷಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಬರ, ಪ್ರವಾಹ ಇತರೆ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯ ಪರಾಮರ್ಶೆ ಕುರಿತು ಹಾಗೂ ಅದನ್ನು ನಿಭಾಯಿಸುವ ಕುರಿತು ರಚನೆಯಾಗಿರುವ ಸಂಪುಟ ಉಪ ಸಮಿತಿಯ ಸಭೆ ವಿಧಾನಸೌಧದಲ್ಲಿ ನಡೆಯಿತು. ರಾಜ್ಯದ ಕೆಲವೆಡೆ ಬೆಳೆ ಒಣಗುತ್ತಿದ್ದು, ಬರ ಘೋಷಿಸುವಂತೆ ರೈತರು ಒತ್ತಾಯಿಸುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬುಧವಾರದಿಂದಲೇ 120 ತಾಲೂಕುಗಳಲ್ಲಿ ತಲಾ ಆಯ್ದ 10 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಐದು ಬೆಳೆಗಳನ್ನು ಗುರುತಿಸಿ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಲಿದ್ದಾರೆ ಎನ್ನಲಾಗಿದೆ.
ಕೇಂದ್ರದ ಮಾನದಂಡಗಳ ಅನ್ವಯ ಬರ ಘೋಷಿಸುವುದು ಕಷ್ಟವಾಗುತ್ತಿದೆ. ಮಾನದಂಡಗಳು ಕಠಿಣವಾಗಿದ್ದು, ಪರಿಸ್ಥಿತಿಗೆ ಸೂಕ್ತವಾಗುತ್ತಿಲ್ಲ. ಆ ಋುತುಮಾನದಲ್ಲಿ ಶೇ.60ರಷ್ಟು ಮಳೆ ಕೊರತೆಯಾದರಷ್ಟೇ ಬರ ಘೋಷಣೆಗೆ ಪರಿಗಣಿಸಬಹುದು ಎಂದು ಕೇಂದ್ರದ ಮಾನದಂಡದಲ್ಲಿ ಇದೆ. ಜೂನ್‌ನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಶೇ. 24ರಷ್ಟು ಮಳೆ ಕೊರತೆ ಪರಿಗಣಿಸಲಾಗುತ್ತದೆ ಎದು ಹೇಳಿದ್ದಾರೆ.








