ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಒಡೆತನದಲ್ಲಿರುವ ‘ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಮೇಲೆ Enforcement Directorate (ED) ಅಧಿಕಾರಿಗಳ ದಾಳಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಸೇಡಿನ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಅವರು ಒಬ್ಬ ಹಿರಿಯ ದಲಿತ ನಾಯಕ. ಅವರು ರಾಜಕೀಯವಾಗಿ ಯಶಸ್ವಿಯಾಗಿ ಬೆಳೆಯುತ್ತಿರುವುದನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರನ್ನು ಟಾರ್ಗೆಟ್ ಮಾಡೋಣ ಅನ್ನೋ ಉದ್ದೇಶದಿಂದಲೇ ಈ ರೀತಿಯ ದಾಳಿಗಳು ನಡೆಯುತ್ತಿವೆ. ಸಿದ್ಧಾರ್ಥ ಸಂಸ್ಥೆ ಬಹು ವರ್ಷಗಳಿಂದ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದೆ. ಇಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೀಗಿದ್ದರೂ ಈ ಸಂಸ್ಥೆಯ ವಿರುದ್ಧ ಎರಡು ಬಾರಿ ದಾಳಿ ನಡೆದಿದೆ. ಈ ಹಿಂದೆ ಆದಾಯ ತೆರಿಗೆ ಇಲಾಖೆಯ ದಾಳಿಯ ನಂತರ ಈಗ ಮತ್ತೆ ED ದಾಳಿ – ಇದನ್ನೆಲ್ಲ ಎಲ್ಲಿಯವರೆಗೆ ಸಹಿಸೋಣ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಕೇವಲ ಡಾ. ಪರಮೇಶ್ವರ್ ಅವರ ವಿರುದ್ಧವಲ್ಲ, ಈ ದಾಳಿಯ ಮೂಲಕ ಬಿಜೆಪಿಯು ದಲಿತರು, ಹಿಂದುಳಿದ ವರ್ಗದವರು, ಬಡವರನ್ನು ಕುಗ್ಗಿಸುವ ಯೋಜನೆಯ ಭಾಗವಾಗಿ ನಡೆದುಕೊಳ್ಳುತ್ತಿದೆ. ಅವರ ಶೈಕ್ಷಣಿಕ ಸಂಸ್ಥೆಯನ್ನು ಕಾನೂನಾತ್ಮಕ ಬಲದಿಂದ ಕೆಳಗಿಳಿಸೊ ಯತ್ನ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯ ತರುವ ವಿಷಯ ಎಂದರು.
ಈ ಹಿಂದೆ ಆದಾಯ ತೆರಿಗೆ ಇಲಾಖೆ ಕೂಡ ಇದೇ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದು, ಈಗ Enforcement Directorate ದಾಳಿ ನಡೆದಿರುವುದು ಪ್ರಶ್ನೆ ಮೂಡಿಸುವಂತಹದ್ದು ಎಂಬುದು ಕಾಂಗ್ರೆಸ್ ನಾಯಕರ ಆರೋಪ.
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಇತರ ನಾಯಕರು ಕೂಡ ಪ್ರತಿಕ್ರಿಯೆ ನೀಡಿದ್ದು, ಸರ್ಕಾರವನ್ನು ತೊಲಗಿಸಲು ಸಾಧ್ಯವಾಗದ ಬಿಜೆಪಿ ಈಗ ನಾಯಕರ ವ್ಯಕ್ತಿತ್ವವನ್ನು ಕುಗ್ಗಿಸುವ ಪ್ರಯತ್ನದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.








