80 ವರ್ಷ ಮೇಲ್ಪಟ್ಟ ವೃದ್ಧರು , ವಿಶೇಷ ಚೇತನರು ಮನೆಯಲ್ಲಿದ್ದೇ ವೋಟು ಹಾಕಬಹುದು..!
ಒಂದೆಡೆ ಒಮಿಕ್ರಾನ್ ಆತಂಕ , ಹೆಚ್ಚಾಗ್ತಿರುವ ಕೋವಿಡ್ ದೈನಂದಿನ ಕೇಸ್ ಗಳು.. ಇದರ ನಡುವೆಯೂ ಸಾವಿರಾರು ಜನರ ಜೊತೆಗೆ ಉತ್ತರಪ್ರದೇಶದಲ್ಲಿ ಬಿಜೆಪಿ , ಕಾಂಗ್ರೆಸ್ ರ್ಯಾಲಿಗಳು ನಡೆಯುತ್ತಿವೆ.. ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು , ಇದಿಗ ಚುನಾವಣಾ ಆಯೋಗವು ಮತದಾರರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದೆ..
80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ವಿಶೇಷ ಚೇತನರು ಮನೆಯಲ್ಲೇ ಇದ್ದು ಮತ ಚಲಾಯಿಸಬಹುದು ಎಂದು ಆಯೋಗ ತಿಳಿಸಿದೆ.
ವೃದ್ಧರು, ಅಂಗವಿಕಲರು, ಕೊರೊನಾ ಸೋಂಕಿಗೆ ಒಳಗಾಗಿರುವವರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲೇ ಇದ್ದು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ವ್ಯವಸ್ಥೆಯನ್ನು ಅವರಿಗೆ ಮಾಡಿಕೊಡಲಾಗುವುದು ಎಂದು ಆಯೋಗ ಹೇಳಿದೆ.
ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾತನಾಡಿ, ವಿಳಂಬ ಮಾಡದೇ ಕೋವಿಡ್ ನಿಯಮಗಳನ್ನು ಪಾಲಿಸಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಹಾಲಿ ಸರ್ಕಾರದ ಅವಧಿ ಮೇ 14ಕ್ಕೆ ಮುಗಿಯಲಿದೆ. ಚುನಾವಣೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಯೋಗವು ಈಗಾಗಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಚುನಾವಣೆ ವೇಳೆ ಯಾವುದೇ ಭ್ರಷ್ಟ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.