ಯಾದಗಿರಿ: ಪಿಎಸ್ಐ ಪರಶುರಾಮ್ (PSI Parashuram) ಸಾವು ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಉದ್ಯೋಗದ ಭರವಸೆ ನೀಡಿದೆ. ಅಲ್ಲದೇ, ಕುಟುಂಬಕ್ಕೆ 50 ಲಕ್ಷ ರೂ. ವಿಶೇಷ ಪರಿಹಾರ ನೀಡುವುದಾಗಿ ಘೋಷಿಸಿದೆ.
ಪರಶುರಾಮ್ ಹುಟ್ಟೂರು ಕೊಪ್ಪಳದ (Koppal) ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಆಗಮಿಸಿದ ಗೃಹ ಸಚಿವ ಜಿ. ಪರಮೇಶ್ವರ್, ಸುಮಾರು 1 ಗಂಟೆ ಕಾಲ ಚರ್ಚಿಸಿದರು. ತಂದೆ ಜನಕಮುನಿ, ತಾಯಿ ಗಂಗಮ್ಮ ಮಗನ ಸಾವಿನ ನೋವು ತೋಡಿಕೊಂಡರು. ಮಗನ ಸಾವಿಗೆ ನ್ಯಾಯಾ ಸಿಗಬೇಕು ಎಂದು ಒತ್ತಾಯಿಸಿದರು. ಈ ವೇಳೆ 50 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗದ ಭರವಸೆಯನ್ನು ನೀಡಿದರು.
ಮಾನವೀಯತೆ ಆಧಾರದ ಮೇಲೆ ನೀಡುವ ಉದ್ಯೋಗವನ್ನು ಪೊಲೀಸ್ ಇಲಾಖೆ ಬದಲಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಜೆಸ್ಕಾಂನಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ನೀಡಬೇಕು ಎಂದು ಪತ್ನಿ ಮತ್ತು ಪಾಲಕರು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ (G.Parameshwar), ಪಿಎಸ್ ಐ ಪರಶುರಾಮ್ ಸಾವಿನ ನಂತರ ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಡೀ ಕುಟುಂಬದ ಜವಾಬ್ದಾರಿ ಮೃತ ಪರಶುರಾಮ್ ಮೇಲೆ ಇತ್ತು. ಅವರ ಅಗಲುವಿಕೆ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ. ತನಿಖಾ ವರದಿ ಆಧರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೃಷಿ ವಿವಿ ಅಥವಾ ಜೆಸ್ಕಾಂನಲ್ಲಿ ಕೆಲಸ ನೀಡುವಂತೆ ಪತ್ನಿ ಶ್ವೇತಾ ಮನವಿ ಮಾಡಿದ್ದಾರೆ. ಈ ಕುರಿತು ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.