ಜಮ್ಮುವಿನಲ್ಲಿ ಎನ್ ಕೌಂಟರ್ | ನಾಲ್ವರು ಭಯೋತ್ಪಾದಕರ ಸಂಹಾರ
ಜಮ್ಮು ಕಾಶ್ಮೀರ : ಕೇಂದ್ರಾಡಳಿತ ಪ್ರದೇಶ ಜಮ್ಮು&ಕಾಶ್ಮೀರದ ಜಮ್ಮುವಿನ ಸುಂಜ್ವಾನ್ ಪ್ರದೇಶದಲ್ಲಿ ಎನ್ಕೌಂಟರ್ ನಡೆಯುತ್ತಿದ್ದು, ಒಬ್ಬ ಯೋಧ ಹುತಾತ್ಮರಾಗಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ಜಮ್ಮುವಿನ ಸುಂಜ್ವಾನ್ ಪ್ರದೇಶದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ಮೇಲೆ ಎನ್ಕೌಂಟರ್ ನಡೆಯುತ್ತಿದ್ದು, ನಾಲ್ವರು ಭಯೋತ್ಪಾದಕರನ್ನು ಯೋಧರು ಹೊಡೆದುರುಳಿದ್ದಾರೆ. ಈ ವೇಳೆ ಯೋಧ ಹುತಾತ್ಮನಾಗಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆಯಿಂದಲೇ ಎನ್ಕೌಂಟರ್ ನಡೆಯುತ್ತಿದ್ದು, ರಾತ್ರಿಯಿಂದ ಯೋಧರು ಮತ್ತು ನಾವು ಭಯೋತ್ಪಾದಕರು ಅಡಗಿ ಕುಳಿತಿದ್ದ ಮನೆಯನ್ನು ಸುತ್ತುವರೆದಿದ್ದೇವೆ ಎಂದು ಪೊಲೀಸ್ ಮಹಾನಿರ್ದೇಶಕರಾದ ಮುಕೇಶ್ ಸಿಂಗ್ ಮಾಹಿತಿ ನೀಡಿದರು.
ಅಲ್ಲದೇ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ನ ಮೇಲೆ ಶುಕ್ರವಾರ ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಿರಿಯ ಸಿಐಎಸ್ಎಫ್ ಅಧಿಕಾರಿಯೊಬ್ಬರ ಪ್ರಕಾರ, ಬೆಳಗ್ಗೆ 4.25ರ ಸುಮಾರಿಗೆ ಬಸ್ ಬೆಳಗಿನ ಪಾಳಿಯ ಕರ್ತವ್ಯಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ. ದಾಳಿ ವೇಳೆ ಸಿಐಎಸ್ಎಫ್ ಕೂಡ ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದೆ.
ಈ ವೇಳೆ ಸಿಐಎಸ್ಎಫ್ನ ಒಬ್ಬ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.