ಬೆಳಗಾವಿ: ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ತಡರಾತ್ರಿ ಬೆಳಗಾವಿಯ ಪಿರನವಾಡಿಯಲ್ಲಿ ತಾವು ಗುರುತಿಸಿದ ಸ್ಥಳದಲ್ಲೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ರಾರಾಜಿಸುವಂತೆ ಮಾಡಿದ್ದಾರೆ.
ಈ ಮೂಲಕ ಗಡಿ ಜಿಲ್ಲೆಯಲ್ಲಿ ಕ್ರಾಂತಿಯ ಕಹಳೆ ಊದಿದ್ದಾರೆ. ಹಲವಾರು ವರ್ಷಗಳಿಂದ ಪಿರನವಾಡಿ ಗ್ರಾಮದ ಮುಖ್ಯ ಸರ್ಕಲ್ ನಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಅಭಿಮಾನಿಗಳು ಹೋರಾಟ ಮಾಡುತ್ತಾ ಬಂದಿದ್ದರು. ಆದರೆ, ಇಂದು ಬೆಳಗಿನ ಜಾವ ಮೂರ್ತಿ ಪ್ರತಿಷ್ಠಾಪನೆ ಮಾಡಿ ಹೂಮಾಲೆ ಹಾಕಿ ರಾಯಣ್ಣನ ಪರ ಘೋಷಣೆಗಳನ್ನು ಕೂಗುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.

ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಿನ್ನೆ ದೊಡ್ಡ ಹೋರಾಟವೇ ನಡೆದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಆ.29ರಂದು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಘೋಷಣೆ ಮಾಡಿದ್ದರು. ಆದರೆ, ಅಭಿಮಾನಿಗಳು ಮಧ್ಯರಾತ್ರಿಯೇ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿವಾದಕ್ಕೆ ತಾರ್ತಿಕ ಅಂತ್ಯ ಹಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
![]()
ರಾಯಣ್ಣ ಪ್ರತಿಮೆ ಸ್ಥಾಪನೆ ವಿಷಯ ಗೊತ್ತಾಗುತ್ತಿದ್ದಂತೆ ಶಿವಾಜಿ ಮೂರ್ತಿಯೊಂದಿಗೆ ಬಂದ ಶಿವಸೇನೆ ಕಾರ್ಯಕರ್ತರು ಕಿರಿಕ್ ಮಾಡಿದ್ದಾರೆ. ಉದ್ರಿಕ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಚದುರಿಸಿದ್ದಾರೆ. ಹೀಗಾಗಿ ಪಿರನವಾಡಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.









