ಆರ್ ಸಿಬಿ ಈ ಬಾರಿಯ ಟೂರ್ನಿಯಲ್ಲಿ ಹೆಸರು ಬದಲಾಯಿಸಿಕೊಂಡು ಕಣಕ್ಕೆ ಇಳಿದಿತ್ತು. ಆದರೆ, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮತ್ತೊಮ್ಮೆ ಸೋಲು ಕಂಡಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದು ಬೆಂಗಳೂರು ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆಗ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.
174 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ಚೆನ್ನೈ ತವರಿನಲ್ಲಿ ಆರ್ಸಿಬಿ ವಿರುದ್ಧದ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಆರ್ಸಿಬಿ ತಂಡವು ಚೆನ್ನೈನಲ್ಲಿ ಗೆಲುವು ದಾಖಲಿಸಿ ಬರೋಬ್ಬರಿ 16 ವರ್ಷಗಳೇ ಕಳೆದಿವೆ. 2008 ರಲ್ಲಿ ಮೊದಲ ಜಯ ಸಾಧಿಸಿದ ನಂತರ ಸಿಎಸ್ಕೆ ವಿರುದ್ಧ ಚೆಪಾಕ್ ಮೈದಾನದಲ್ಲಿ ಜಯವನ್ನೇ ಕಂಡಿಲ್ಲ.
2008 ರಲ್ಲಿ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟದೊಂದಿಗೆ 112 ರನ್ ಮಾತ್ರ ಗಳಿಸಿ ಸೋಲು ಕಂಡಿತ್ತು. ಈ ವೇಳೆ ಬೆಂಗಳೂರು ತಂಡ 14 ರನ್ ಗಳ ರೋಚಕ ಜಯ ಸಾಧಿಸಿತ್ತು. ಇದಾದ ನಂತರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್ಕೆ ವಿರುದ್ಧ ಆರ್ ಸಿಬಿಗೆ ಗೆಲ್ಲಲು ಆಗುತ್ತಿಲ್ಲ.