ನವದೆಹಲಿ : ಜೂನ್ 2ನೇ ವಾರ ಆಗಮಿಸಿದರೂ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಿಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ಸಂಭವನೀಯ ವಾಯುಭಾರ ಕುಸಿತದಿಂದಾಗಿ ಮುಂಗಾರು ಆಗಮನ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಆದರೆ, ಮುಂಗಾರು ಪ್ರವೇಶದ ಕುರಿತು ಇಲಾಖೆಯು ಯಾವುದೇ ದಿನಾಂಕ ಹೇಳಿಲ್ಲ. ನಾಲ್ಕು ದಿನ ತಡವಾಗಿ ಜೂನ್ 4ಕ್ಕೆ ಕೇರಳ ತೀರಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಇಲಾಖೆ ಹೇಳಿತ್ತು. ಬಳಿಕ ಜೂನ್ 7ಕ್ಕೆ ಆಗಮನವಾಗುವ ನಿರೀಕ್ಷೆಯಿದೆ ಎಂದಿತ್ತು. ಆ ನಿರೀಕ್ಷೆಯೂ ಹುಸಿಯಾಗುವ ಸಾಧ್ಯತೆಯಿದೆ.
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಇದ್ದು, ಅದು ಮುಂದಿನ ಎರಡು ದಿನದಲ್ಲಿ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಆಗ ಮುಂಗಾರು ಮಾರುತಗಳ ಚಲನೆ ಮೇಲೆ ಗಂಭೀರ ಪರಿಣಾಮವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಬೆಳಗಾವಿ ಜಿಲ್ಲೆಯ ಹಲವೆಡೆ ಭಾನುವಾರ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾಗಿದ್ದರೆ, ಕೆಲ ಗ್ರಾಮಗಳಲ್ಲಿ ರಭಸದಿಂದ ಮಳೆ ಸುರಿದಿದೆ. ರಾಯಬಾಗ ತಾಲೂಕಿನ ಬಾವನಸೌಂದತ್ತಿ, ಸವದತ್ತಿ ತಾಲೂಕಿನ ಕೆಲವು ಪ್ರದೇಶ, ಗೋಕಾಕ್ ಹಾಗೂ ಬೈಲಹೊಂಗಲ ತಾಲೂಕು, ಮುನವಳ್ಳಿಯ ಕೆಲವು ಕಡೆ ಮಳೆಯಾಗಿದೆ.








