ಪ್ರತೀ ಭಾರತೀಯನೂ ಜನಗಣತಿ ಪ್ರಶ್ನೆಗೆ ಉತ್ತರಿಸಲು ಕಾನೂನುಬದ್ಧವಾಗಿ ಬದ್ಧನಾಗಿರುತ್ತಾನೆ – ಎನ್ ಪಿ ಆರ್ ಕುರಿತು ಸರ್ಕಾರದ ಅಪ್ಡೇಟ್
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ಜನಗಣತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಸದನದಲ್ಲಿ ಮಾಹಿತಿ ನೀಡಿದರು. ಜನಗಣತಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕಾನೂನುಬದ್ಧವಾಗಿ ಬದ್ಧನಾಗಿರುತ್ತಾನೆ ಎಂದು ಅವರು ಹೇಳಿದರು. ಇದೇ ವೇಳೆ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಜನಗಣತಿ ಕಾಯ್ದೆ 1948 ರ ನಿಬಂಧನೆಗಳ ಅಡಿಯಲ್ಲಿ ಜನಗಣತಿ ಕಾರ್ಯಕ್ಕೆ ಸಹಾಯ ಮಾಡಲು ಅಥವಾ ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಗಳು ಜನಗಣತಿ ಅಧಿಕಾರಿಗಳನ್ನು ನೇಮಿಸುತ್ತವೆ ಎಂದು ಹೇಳಿದರು.
ದೇಶಾದ್ಯಂತ ಜನಗಣತಿಗಾಗಿ ಮನೆಗಳನ್ನು ಪಟ್ಟಿ ಮಾಡುವ ಹಂತ ಮತ್ತು ಎನ್‌ಪಿಆರ್ ಅನ್ನು ನವೀಕರಿಸುವ ಕಾರ್ಯವನ್ನ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30, 2020 ರವರೆಗೆ ಮಾಡಬೇಕಾಗಿತ್ತು, ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಗಿತ್ತು.