ಶಾಲೆ ಎಂದ ಮೇಲೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು – ಸಿದ್ದಗಂಗಾ ಶ್ರೀ…
ಶಾಲೆ ಎಂದ ಮೇಲೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು. ಯಾವುದೇ ಕಾರಣಕ್ಕೂ ಬೇರೆಯದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಹಿಜಾಬ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಪೂರ್ಣಪೀಠದ ಆದೇಶ ಬಂದಿದೆ. ಯಾವುದಕ್ಕೂ ಅವಕಾಶ ಮಾಡಿಕೊಡದೇ ಶಾಂತಿಯುತ ವಾತಾವರಣಕ್ಕೆ ಎಲ್ಲರೂ ಸಹಕರಿಸಬೇಕು. ಶಿಸ್ತು ನಿಯಮ ಪಾಲನೆ ಮಾಡಿ ಕರ್ನಾಟಕದ ಸಂಸ್ಕೃತಿ ಪರಂಪರೆ ಎತ್ತಿ ಹಿಡಿದು ಶಾಂತಿಯುತವಾಗಿರಬೇಕು ಎಂದು ಸುದ್ದಿಗಾರರೊಂದಿಗೆ ಮಾತನಾಡುವ ಮೂಲಕ ಮನವಿ ಮಾಡಿದರು.
ಸುದೀರ್ಘ ಚರ್ಚೆ, ವಾದ, ಪ್ರತಿವಾದ ಆಲಿಸಿ ಕೋರ್ಟ್ ತೀರ್ಪು ಕೊಟ್ಟಿದೆ. 15 ದಿನಗಳ ಕಾಲ ಸಮಯಾವಕಾಶದ ನಂತರ ಇವತ್ತು ತೀರ್ಪು ಪ್ರಕಟವಾಗಿದೆ. ಸರ್ಕಾರ ಹೊರಡಿಸಿದ ವಸ್ತ್ರ ಸಂಹಿತೆ ಕಾನೂನು ಪಾಲನೆ ಮಾಡಬೇಕು ಎಂದು ತೀರ್ಪು ಕೊಟ್ಟಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಮನವಿ ಮಾಡಿದೆ. ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.