HDK | ಪ್ರತಿ ಹುದ್ದೆಗೂ ರೇಟ್ ಫಿಕ್ಸ್.. ʼಉದ್ಯೋಗ ವ್ಯಾಪಾರೀಕಣ ಸರ್ಕಾರದ ʼಅಧಿಕೃತ ಕಸುಬುʼ

1 min read
CM Bommai Saaksha Tv

HDK | ಪ್ರತಿ ಹುದ್ದೆಗೂ ರೇಟ್ ಫಿಕ್ಸ್.. ʼಉದ್ಯೋಗ ವ್ಯಾಪಾರೀಕಣ ಸರ್ಕಾರದ ʼಅಧಿಕೃತ ಕಸುಬುʼ

ಬೆಂಗಳೂರು : ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಿರುವ ರಾಜ್ಯ ಸರಕಾರವು ʼಉದ್ಯೋಗ ವ್ಯಾಪಾರೀಕಣʼವನ್ನೇ ʼಅಧಿಕೃತ ಕಸುಬುʼ ಮಾಡಿಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳನ್ನ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ, ಸ್ವಜನ ಪಕ್ಷಪಾತ, ಕಳ್ಳಮಾರ್ಗ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪೊಲೀಸ್ ನೇಮಕಾತಿ ಮಂಡಳಿಗಳು ಲಂಚಗುಳಿತನದ ಕೂಪಗಳಾಗಿವೆ.

ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಿರುವ ರಾಜ್ಯ ಸರಕಾರವು ʼಉದ್ಯೋಗ ವ್ಯಾಪಾರೀಕಣʼವನ್ನೇ ʼಅಧಿಕೃತ ಕಸುಬುʼ ಮಾಡಿಕೊಂಡಿದೆ. ʼಸರಕಾರಿ ಕೆಲಸದ ರೇಟ್ ಕಾರ್ಡ್ʼ ಬಗ್ಗೆ ನಾನು ಪದೆಪದೇ ಹೇಳುತ್ತಲೇ ಇದ್ದೆ. ಕೆಪಿಎಸ್ಸಿ ಹುದ್ದೆಗಳ ʼಮುಕ್ತ ಮಾರಾಟʼದ ಬಗ್ಗೆಯೂ ಹೇಳಿದ್ದೆ. ಆದರೆ, ಸರಕಾರದ್ದು ಜಾಣನಿದ್ದೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಿರುವ ಹೆಚ್ ಡಿಕೆ, ನಾನು 2 ಸಲ ಸಿಎಂ ಆಗಿದ್ದಾಗ ಕೆಪಿಎಸ್ಸಿ ಅಕ್ರಮಗಳಿಗೆ  ಕಡಿವಾಣ ಹಾಕಿದ್ದೆ. ಕೆಪಿಎಸ್ಸಿಯನ್ನು ತೊಳೆಯುತ್ತೇನೆಂದ ʼಸಿದ್ದಹಸ್ತʼರೊಬ್ಬರು ಬಿಡಿಎಯನ್ನು ಗುಡಿಸಿಗುಂಡಾಂತರ ಮಾಡಿದ್ದ, ʼರೀಡೂ ಋಣʼದ  ʼತಿಮಿಂಗಿಲʼವನ್ನೇ ತಂದು ಕೆಪಿಎಸ್ಸಿಯಲ್ಲಿ ಕೂರಿಸಿದ್ದರು. ಆದರೆ, ನಾನು ಭಷ್ಟರು ಉದ್ಯೋಗಸೌಧದ ಮೆಟ್ಟಿಲು ಹತ್ತಲು ಬಿಟ್ಟಿರಲಿಲ್ಲ.

2018ರಲ್ಲಿ ನಾನು ಸಿಎಂ ಆಗಿದ್ದಾಗ ʼಸಿದ್ದಹಸ್ತರುʼ ತಮಗೆ ಬೇಕಾದವರ ಹೆಸರನ್ನು ಶಿಫಾರಸು ಮಾಡಿ, ಕೆಪಿಎಸ್ಸಿಯಲ್ಲಿ ಪ್ರತಿಷ್ಠಾಪಿಸಿ ಎಂದು ಒತ್ತಡ ಹೇರಿದ್ದರು. 2006ರಲ್ಲೂ ಕೆಲ ಶಾಸಕರು ತಮ್ಮ ಸಮುದಾಯದವರನ್ನು ಕರೆತಂದು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿ ಎಂದು ದುಂಬಾಲು ಬಿದ್ದಿದ್ದರು. ಅವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ್ದೆ.

ನನ್ನ ಅಧಿಕಾರಾವಧಿಯಲ್ಲಿ ಒಮ್ಮೆಯೂ ಯಾವುದೇ ಇಲಾಖೆಯಲ್ಲಿ ನೇಮಕದ ಅಕ್ರಮ ನಡೆದಿಲ್ಲ. ಸಚ್ಛಾರಿತ್ರ್ಯ, ಅರ್ಹತೆ ಇದ್ದವರನ್ನೇ ಕೆಪಿಎಸ್ಸಿಗೆ ನೇಮಕ ಮಾಡಿದ್ದೆ. ಅಂಥ ನೇಮಕಾತಿ ಅಥವಾ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಲೋಪವೂ ಆಗಿಲ್ಲ. ಒಂದು ವೇಳೆ ಲೋಪವಾಗಿದ್ದರೆ ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಹೆಚ್ ಡಿ ಕೆ ತಿಳಿಸಿದ್ದಾರೆ.

ನೇಮಕಾತಿ ಸಂಸ್ಥೆಗಳು ಹುಟ್ಟಿದಾಗಿನಿಂದಲೂ ರಾಜಕೀಯ ಕಾರಣಗಳಿಗೆ ಕೆಲವರು ಉದ್ಯೋಗ ಗಿಟ್ಟಿಸುತ್ತಿದ್ದರು. ʼಸಾಧ್ಯವಾದರೆ ಸಹಾಯ ಮಾಡಿʼ ಎಂದು ಶಾಸಕರೋ, ಮತ್ತ್ಯಾರೋ ಮನವಿ ಮಾಡುತ್ತಿದ್ದರು. ಅಂಥ ಅಭ್ಯರ್ಥಿಗಳು ಅರ್ಹ ಅಂಕ ಪಡೆದಿದ್ದರೆ ಮಾತ್ರ ಆಯ್ಕೆ ಆಗುತ್ತಿದ್ದರು.

ಹಿಂದೆ ಶಿಫಾರಸು ಅಭ್ಯರ್ಥಿಗಳಿಗೆ ಅರ್ಹತೆ ಇಲ್ಲದಿದ್ದರೆ ಸಿಎಂ ಹೇಳಿದರೂ ಕೆಲಸ ಆಗುತ್ತಿರಲಿಲ್ಲ. ಯಾವಾಗ ಹಣ, ಜಾತಿಗಳ ಪ್ರಭಾವ ಹೆಚ್ಚಾಯಿತೋ ʼಸರಕಾರಿ ಕೆಲಸಗಳ ʼಕಾಸ್‌ʼಗೀಕರಣʼವೂ ಶುರುವಾಯಿತು.

ಪಿಎಸ್ಐ ಅಕ್ರಮದ ಬಗ್ಗೆ ಕಹಿಸತ್ಯಗಳನ್ನು ಹೇಳಿದ ನನ್ನನ್ನೇ ದಾಖಲೆ ಕೊಡಿ ಎನ್ನುವ ಸರಕಾರಕ್ಕೆ ʼಸಾಚಾತನʼದ ಕೊರತೆ ಇದೆ. ಹಿಟ್ ಆಂಡ್ ರನ್ ಎನ್ನುವ ಮೂಲಕ ಕೆಲವರು ಅಕ್ರಮದ ಬಲೆಯಿಂದ ಅಕ್ಕಪಕ್ಕ ಸರಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ex cm hd kumaraswamy slams karnataka bjp

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd