ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಯೋಧರು ಹುತಾತ್ಮರಾಗಿರುವ ಕುರಿತು ಹಿರಿಯ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಕಥುವಾದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ನಲ್ಲಿ ರೈಸಿಂಗ್ ಸ್ಟಾರ್ ಕಾರ್ಪ್ಸ್‌ನ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಕಿಶ್ತ್ವಾರ್‌ನ ಚತ್ರೂದಲ್ಲಿ ಪ್ರಾರಂಭಿಸಲಾಗಿದೆ. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಹೇಳಿದೆ.
ಕಿಶ್ತ್ವಾರ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರೇ ಜುಲೈನಲ್ಲಿ ದೋಡಾದಲ್ಲಿ ನಡೆದ ಮತ್ತೊಂದು ಎನ್ ಕೌಂಟರ್‌ನಲ್ಲೂ ಭಾಗಿಯಾಗಿದ್ದರು. ಆ ವೇಳೆ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು.