ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರೆಸಿರುವ ಅನ್ನದಾತರು, ಇಂದು ಬಾರುಕೋಲು ಚಳವಳಿ ಮೂಲಕ ರಾಜಧಾನಿ ಬೆಂಗಳೂರಿಗೆ ಲಗ್ಗೆ ಹಾಕಲಿದ್ದಾರೆ.
ನಿನ್ನೆಯಷ್ಟೇ ಭಾರತ್ ಬಂದ್‍ನಲ್ಲಿ ಪಾಲ್ಗೊಂಡಿದ್ದ ರೈತರು, ಇಂದು ಬೆಂಗಳೂರಿನಲ್ಲಿ ಬಾರುಕೋಲು ಚಳವಳಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲಿದ್ದಾರೆ.
ರಾಜ್ಯ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸೇರಿದಂತೆ ರೈತ ಸಂಘಟನೆಗಳ ನೇತೃತ್ವದಲ್ಲಿ ಇಂದು 10 ಸಾವಿರಕ್ಕೂ ಹೆಚ್ಚು ರೈತರು ಸರ್ಕಾರದ ವಿರುದ್ಧ ಬಾರುಕೋಲಿನ ಚಾಟಿಯ ಸದ್ದು ಮೊಳಗಿಸಲಿದ್ದಾರೆ.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಬಾರುಕೋಲು ಚಳವಳಿ ನಡೆಸಿ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ನಿರ್ಧರಿಸಿವೆ.
ಈಗಾಗಲೇ ರೈಲಿನ ಮೂಲಕ ರೈಲ್ವೆ ನಿಲ್ದಾಣಕ್ಕೆ ರೈತರು ಆಗಮಿಸಿದ್ದು, ಕೆಲವೇ ಹೊತ್ತಿನಲ್ಲಿ ರೈತರ ಪಾದಯಾತ್ರೆ ಆರಂಭವಾಗಲಿದೆ.
ರೈಲ್ವೆ ನಿಲ್ದಾಣಕ್ಕೆ ಬಂದ ರೈತರನ್ನು ಹಸಿರು ಶಾಲು ತೆಗೆಯಿರಿ, ಬಾರುಕೋಲು ತೆಗೆಯಿರಿ ಎಂದು ಪೊಲೀಸರು ವಾರ್ನ್ ಮಾಡಿದ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿದೆ.
ಪ್ರಮುಖವಾಗಿ ಭೂಸುಧಾರಣಾ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ರೈತರು ನಿತಂತರ ಹೋರಾಟ ನಡೆಸಲಿದ್ದಾರೆ. ಬಾರುಕೋಲು ಚಳವಳಿ ಮೂಲಕ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ರೈತರ ಪ್ರತಿಭಟನೆ ಹಿನ್ನೆಲೆ ಪೋಲೀಸರು ಅಲರ್ಟ್..!
ಬೆಂಗಳೂರು ನಗರದ ನಾಲ್ಕು ದಿಕ್ಕುಗಳಿಂದ ರೈತರು ರಾಜಧಾನಿಗೆ ಲಗ್ಗೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ನಿಲ್ದಾಣ, ಫ್ರೀಡಂಪಾರ್ಕ್, ವಿಧಾನಸೌಧ, ರಾಜಭವನಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರೈಲ್ವೆ ನಿಲ್ದಾಣದ ಬಳಿ 500 ಪೊಲೀಸರ ನಿಯೋಜನೆ ಮಾಡಲಾಗಿದ್ದು, ಅನಂದರಾವ್ ವೃತ್ತದ ಬಳಿ 200 ಪೊಲೀಸರು, ಕಾರ್ಪೋರೇಷನ್, ಮೈಸೂರು ಬ್ಯಾಂಕ್ ವೃತ್ತದ ಬಳಿ 800 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ವಿಧಾನಸೌಧ ಹಾಗೂ ರಾಜಭವನಕ್ಕೆ ರೈತರು ಮುತ್ತಿಗೆ ಹಾಕಲು ಪ್ಯಾಲೇಸ್ ರಸ್ತೆ ಮೂಲಕ ಬರುತ್ತಿರುವ ಹಿನ್ನೆಲೆಯಲ್ಲಿ ಮಹಾರಾಣಿ ಕಾಲೇಜು, ಸಿಐಡಿ ಕಚೇರಿ ಬಳಿ ಬ್ಯಾರಿಕೇಡ್ ಹಾಕಲಾಗಿದೆ.
ಟ್ರಾಫಿಕ್ ಜಾಮ್ ಬಿಸಿ
ಕೃಷಿ ಕಾಯ್ದೆಗಳ ವಿರುದ್ಧ ರೈತರು ಶಕ್ತಿಸೌಧಕ್ಕೆ ಮುತ್ತಿಗೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಇಂದು ಸ್ತಬ್ದವಾಗುವ ಸಾಧ್ಯತೆ ಇದೆ. ರೈತರು ಪಾದಯಾತ್ರೆ ನಡೆಸುವ ರಸ್ತೆಗಳ ಮಾರ್ಗವನ್ನು ಪೊಲೀಸರು ಡೈವರ್ಟ್ ಮಾಡಿದ್ದು, ಕೆಲವೆಡೆ ಒನ್‍ವೇ ಮಾಡಲಾಗಿದೆ. ಬೆಂಗಳೂರು ನಗರ ಪ್ರವೇಶ ಮಾಡುವ ಟೋಲ್‍ಗಳಲ್ಲೇ ರೈತರನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ರೈತ ಸಂಘಟನೆಗಳಲ್ಲದೆ, ಬಿಬಿಎಂಪಿ ಕಚೇರಿಯಿಂದ ರಾಜಭವನವರೆಗೆ ಟಿ.ಎ ನಾರಾಯಣಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಜಾಥಾ ನಡೆಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರಕ್ಕೆ ಇಂದು ಅಕ್ಷರಶಃ ಟ್ರಾಫಿಕ್ ಜಾಮ್‍ನ ಬಿಸಿ ತಟ್ಟಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel