ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೆ.ಆರ್. ನಗರ ಕಾಂಗ್ರೆಸ್ ಸಮಾವೇಶದಲ್ಲಿ ಈ ಕುರಿತು ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಸಂಪೂರ್ಣವಾಗಿ ರೈತರ ಸಾಲ ಮನ್ನಾ ಮಾಡಲಿದ್ದೇವೆ. ಈ ಮೂಲಕ ಈ ಬಾರಿ ಅವರು ಸಾಲ ಮನ್ನಾ ಅಸ್ತ್ರ ಪ್ರಯೋಗಿಸಿದ್ದಾರೆ. ಬಿಜೆಪಿಗೆ ರೈತರ ಬಳಿ ಬಂದು ಮತ ಕೇಳುವ ನೈತಿಕತೆ ಇಲ್ಲ. ಪ್ರದಾನಿ ಮೋದಿ ಯಾವ ಮುಖ ಹೊತ್ತುಕೊಂಡು ಮತ ಕೇಳುತ್ತಿದ್ದಾರೆ. ಉದ್ಯೋಗ ಕೇಳಿದರೆ ಪಕೋಡ ಮಾರಿ ಎಂದ ಮೋದಿ ಈ ದೇಶದ ಪ್ರಧಾನ ಮಂತ್ರಿ ಆಗೋಕೆ ಲಾಯಕ್ ಇದ್ದಾರಾ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಅವರನ್ನು ದೇವೇಗೌಡರು ಹೊಗಳಿದ್ದೇ ಹೊಗಳಿದ್ದು. ಬಿಜೆಪಿಯ ಬಿ ಟೀಂ ಅಂದಿದ್ದಕ್ಕೆ ನನ್ನ ಮೇಲೆ ಕೆಂಡಾಮಂಡಲವಾದರು. ನಾನು ಸತ್ಯ ಹೇಳಿದ್ರೆ ಸಿದ್ದರಾಮಯ್ಯಗೆ ಗರ್ವ ಅಂತಾರೆ. ಅಲ್ಲದೇ, ಗರ್ವ ಭಂಗ ಮಾಡಿ ಅಂತಾರೆ. ಕೋಲಾರ ಮೀಸಲು ಕ್ಷೇತ್ರ ಆಗದೇ ಇದ್ದರೆ ಅಲ್ಲೂ ದೇವೇಗೌಡರ ಮನೆಯವರೇ ನಿಲ್ಲುತ್ತಿದ್ದರು. ಕುಟುಂಬದ ರಕ್ಷಣೆಗಾಗಿ ದೇವೇಗೌಡರು ಬಿಜೆಪಿ ಜೊತೆ ಸೇರಿದ್ದಾರೆ. ಚುನಾವಣೆ ಮುಗಿದ ಕೂಡಲೇ ನಮ್ಮ ಸರ್ಕಾರ ಪತನ ಆಗುತ್ತೆ ಅಂತಾರೆ. ಇವರು ಯಾವ ನೈತಿಕತೆ ಮೇಲೆ ಮಾತನಾಡುತ್ತಿದ್ದಾರೆ ಎಂದು ಚಿಂತಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐದು ವರ್ಷವೂ ಈ ಸರ್ಕಾರ ಇರುತ್ತೆ. ಮುಂದಿನ ಚುನಾವಣೆಯಲ್ಲೂ ನಮ್ಮದೆ ಸರ್ಕಾರ ಬರುತ್ತದೆ. ಹಗಲು ಕನಸು ಕಾಣುತ್ತಿದ್ದಿರಿ. ಇವರು ಹೇಳಿದ ತಕ್ಷಣ ಸರ್ಕಾರ ಬೀಳುತ್ತಾ? ನಾನು ಎರಡು ಬಾರಿ ಸಿಎಂ ಆಗಿದ್ದಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಹೊಟ್ಟೆ ಉರಿ ಎಂದು ಗುಡುಗಿದ್ದಾರೆ.