ಬೆಂಗಳೂರು : ಕೊಪ್ಪಳ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಧಿಡೀರ್ ಯೂರಿಯಾ ಗೊಬ್ಬರಕ್ಕೆ ಹಾಹಾಕಾರ ಎದ್ದಿದೆ. ಬೇಡಿಕೆಯಷ್ಟು ಗೊಬ್ಬರ ಪೂರೈಕೆ ಇಲ್ಲ ಎಂಬ ಎನ್ನುತ್ತಿರುವ ಮಾರಾಟಗಾರರು ಪ್ರತಿ ಚೀಲ ಯೂರಿಯಾ ಗೊಬ್ಬರದ ದರವನ್ನು ರೂ. 50 ರಿಂದ ರೂ. 135ರಷ್ಟು ಹೆಚ್ಚಿಸಿ ಮಾರಾಟ ಮಾಡಿ ರೈತರ ಬಳಿ ಸುಲಿಗೆ ಮಾಡುತ್ತಿದ್ದಾರೆ. ಯೂರಿಯಾ ದಂಧೆಯಿಂದಾಗಿ ರೈತರು ಕಂಗಾಲಾಗಿದ್ದು, ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ರಸಗೊಬ್ಬರ ಪೂರೈಕೆಗೆ ಕೂಡಲೇ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮ್ಯಯ, “ಮುಂಗಾರು ಶುರುವಾದಾಗಲೇ ರೈತರಿಗೆ ಬೀಜ,ಗೊಬ್ಬರ ಕೊರತೆಯಾಗದಂತೆ ದಾಸ್ತಾನಿಗೆ ವ್ಯವಸ್ಥೆ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೆ. ನಿರೀಕ್ಷೆಯಂತೆಯೇ ಸರ್ಕಾರದ ವೈಫಲ್ಯದ ಫಲವನ್ನು ರೈತರು ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಗಮನ ಹರಿಸಿ ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.