ಬಡ ಜನರ ಉದ್ಧಾರಕ್ಕಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ನಡುವೆ, ಈ ಯೋಜನೆಗಳ ಪರಿಣಾಮವಾಗಿ ಜನರಲ್ಲಿ ಜಡತ್ವ ಮೂಡುತ್ತಿದೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನಾನು ಒಬ್ಬ ಜನಪ್ರತಿನಿಧಿಯಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಮುಖ್ಯ ಉದ್ದೇಶವನ್ನು ಸಂವಿಧಾನ ಬದ್ಧವಾಗಿ ವಿವರಿಸಬೇಕಾಗಿದೆ, ಎಂದು ಹೇಳಿದರು.
ಅವರು ಮುಂದುವರೆದು, ಬಡವರು, ಮಹಿಳೆಯರು, ಹಿರಿಯ ನಾಗರಿಕರು, ನಿರುದ್ಯೋಗಿ ಯುವಕರು ಮತ್ತು ರೈತರು ಸೇರಿದಂತೆ ಎಲ್ಲ ವರ್ಗಗಳಿಗೂ ನೆರವಾಗುವಂತೆ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಕೇವಲ ರಸ್ತೆಗಳು, ಚರಂಡಿಗಳು ಅಥವಾ ದೊಡ್ಡ ಕಟ್ಟಡಗಳ ನಿರ್ಮಾಣವಲ್ಲದೆ, ಹಸಿದ ಹೊಟ್ಟೆಗೆ ಹೊಟ್ಟೆ ತುಂಬಾ ಅನ್ನ ನೀಡುವುದು ಸಹ ಒಂದು ದೊಡ್ಡ ಅಭಿವೃದ್ಧಿಯ ಸೂಚಕವಾಗಿದೆ ಎಂದು ಪ್ರತಿಪಾದಿಸಿದರು.
ರಾಜಕೀಯ ದೃಷ್ಟಿಕೋನದಲ್ಲಿ ಅಥವಾ ಧಾರ್ಮಿಕ ನೆಲೆಯಲ್ಲಿ ಈ ಯೋಜನೆಗಳ ಉದ್ದೇಶವನ್ನು ತಪ್ಪಾಗಿ ಅರ್ಥೈಸುವುದು ಸರಿಯಲ್ಲ. ಸರ್ಕಾರ ಜನರೊಂದಿಗೆ ಇರುವುದು ಮತ್ತು ಅವರಿಗೆ ನೆರವಾಗುವುದೇ ನಮ್ಮೆಲ್ಲರ ಕರ್ತವ್ಯ, ಎಂದೂ ಅವರು ಹೇಳಿದರು.








