ಬಳ್ಳಾರಿ : ಬಳ್ಳಾರಿ (Ballari) ಜಿಲ್ಲೆ ಜಿಲ್ಲೆಯಲ್ಲಿ ಈ ಬಾರಿ ರೆಡ್ಡಿ ಕುಟುಂಬಗಳ ಮಧ್ಯೆಯೇ ಯುದ್ಧ ನಡೆಯುತ್ತಿದೆ. ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಕುಟುಂಬಕ್ಕೆ ಠಕ್ಕರ್ ಕೊಡಬಲ್ಲ ಮತ್ತೊಂದು ರೆಡ್ಡಿ ಕುಟುಂಬ ಎಂದರೆ ಅದು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಕುಟುಂಬ.
ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್ ರೆಡ್ಡಿ (Nara Bharath Reddy) ಕಾಂಗ್ರೆಸ್ ನಿಂದ (Congress) ಕಣಕ್ಕೆ ಇಳಿದಿದ್ದಾರೆ. 0ಜನಾರ್ದನ ರೆಡ್ಡಿ ಪತ್ನಿ ಅಖಾಡದಲ್ಲಿ ಇರುವುದರಿಂದ ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಸ್ಪರ್ಧೆ ನಡೆಯಲಿದೆ. ಹಣ ಬಲ, ತೋಳ್ಬಲ ಈ ಎರಡೂ ಕುಟುಂಬಗಳಲ್ಲಿ ಇರುವುದರಿಂದಾಗಿ ಈ ಕಣ ರಂಗೇರಿದೆ.
ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಸೋಮಶೇಖರ್ ರೆಡ್ಡಿ (G.Somashekar Reddy) ಮತ್ತೊಮ್ಮೆ ಗೆಲ್ಲುವ ಇರಾದೆಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಆಮೆಗತಿ ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಗರ ಪ್ರದೇಶದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಶಾಸಕ ಸೋಮಶೇಖರ್ ರೆಡ್ಡಿಯವರಿಗೆ ದೊಡ್ಡ ವಿರೋಧ ವ್ಯಕ್ತವಾಗಿದೆ. ಜನಾರ್ದನ ರೆಡ್ಡಿ ಮತ್ತು ರಾಮುಲು ನಡುವಿನ ಬಿರುಕು, ರೆಡ್ಡಿ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರಲಿದೆ.
ಕಳೆದ ಒಂದು ತಿಂಗಳಿನಿಂದ ಸುಮಾರು 12 ಸಾವಿರ ಮನೆಗಳಿಗೆ ಪಟ್ಟಾ ವಿತರಣೆ ಮಾಡಿದ ಸೋಮಶೇಖರ್ ರೆಡ್ಡಿ ಮತ ನೀಡಿ ಒಂದು ಬಾರಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಕೈ-ಕಮಲ ಪಕ್ಷಗಳ ನಡುವೆ ಸಾಂಪ್ರದಾಯಿಕ ಹೋರಾಟಕ್ಕೆ ಸಾಕ್ಷಿಯಾಗುತ್ತಾ ಬಂದಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅಸ್ವಿತ್ವಕ್ಕೆ ತಂದ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಪ್ರವೇಶ ತೀವ್ರ ಕುತೂಹಲ ಮೂಡಿಸಿದೆ.
ನಗರದಲ್ಲಿ ಕೆಆರ್‌ಪಿಪಿ (KRPP) ಪಕ್ಷದ ಅರುಣಾ ಲಕ್ಷ್ಮೀ ಸ್ಪರ್ಧೆಯಿಂದ ಸಹಜವಾಗಿ ಮೂರು ಪಕ್ಷಗಳ ಮಧ್ಯೆ ಫೈಟ್ ನಡೆದಿದೆ. ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಯಿದ್ದು, ಅಭಿವೃದ್ಧಿಯಿಂದ ಕ್ಷೇತ್ರ ಹಿಂದುಳಿದಿದೆ. ಬಿಜೆಪಿ ಕಾರ್ಯಕರ್ತರ ಕಡೆಗಣನೆ, ರೆಡ್ಡಿ ವಿರುದ್ಧದ ಕಾರ್ಯಕರ್ತರ ಅಸಮಾಧಾನ, ಬಿಜೆಪಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಕಾಂಗ್ರೆಸ್ ಇದರ ಲಾಭ ಪಡೆಯಲು ಮುಂದಾಗಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,55,385 ಮತದಾರರಿದ್ದಾರೆ. ಪುರುಷರು 1,24,199 ಪುರುಷ ಮತದಾರರಿದ್ದು, 1,31,557 ಮಹಿಳಾ ಮತದಾರರು ಇದ್ದಾರೆ. ಇನ್ನೂ ಜಾತಿವಾರು ನೋಡುವುದಾದರೆ, ಲಿಂಗಾಯಿತರು 45 ಸಾವಿರ, ಕುರುಬರು 25 ಸಾವಿರ, ಮುಸ್ಲಿಂ 35 ಸಾವಿರ, ಬಲಿಜ, ರೆಡ್ಡಿ, ಕಮ್ಮ 60 ಸಾವಿರ, ಎಸ್ಸಿ 25 ಸಾವಿರ, ಬ್ರಾಹ್ಮಣ, ಶೆಟ್ಟಿ ಹಾಗೂ ಇನ್ನಿತರ ಸಮುದಾಯದ 25 ಸಾವಿರ ಮತದಾರರಿದ್ದಾರೆ.
ಈ ಕ್ಷೇತ್ರದ ರಾಜಕೀಯ ಹಿನ್ನೋಟ ನೋಡುವುದಾದರೆ,
1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಮುಂಡ್ಲೂರು ಗಂಗಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ವಿರುದ್ಧ ಜಯಗಳಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನ ಟಿ.ಜಿ. ಸತ್ಯನಾರಾಯಣ ಜಯಗಳಿಸಿದರೆ, 1967ರಲ್ಲಿ ಎಸ್ ಡಬ್ಲ್ಯುಎಂ ಪಕ್ಷದ ವಿ.ನಾಗಪ್ಪ ಗೆದ್ದಿದ್ದರು. 1972ರಲ್ಲಿ ಎನ್‌ಸಿಒ ಪಕ್ಷದಿಂದ ಇವರು ಮತ್ತೆ ಆಯ್ಕೆಯಾಗಿದ್ದರು. 1978ರಲ್ಲಿ ಕೆ.ಭಾಸ್ಕರ್ ನಾಯ್ಡು ಕಾಂಗ್ರೆಸ್ (ಐ) ಪಕ್ಷದಿಂದ ಗೆದ್ದಿದ್ದರು.
1982ರಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಮುಂಡ್ಲೂರು ರಾಮಪ್ಪ ಜಯಗಳಿಸಿ, 1985 ಹಾಗೂ 1989ರಲ್ಲಿ ಸತತ ಆಯ್ಕೆಯಾಗಿದ್ದರು. 1994ರಲ್ಲಿ ಪಕ್ಷೇತರರಾಗಿ ಎಂ.ದಿವಾಕರ ಬಾಬು ಗೆದ್ದರು. 1999ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಸಚಿವ ಬಿ.ಶ್ರೀರಾಮುಲು ಗೆಲುವು ಸಾಧಿಸಿದ್ದರು. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾಗಿ ಬಳ್ಳಾರಿ ನಗರ ಕ್ಷೇತ್ರವಾದ ಬಳಿಕ 2008ರಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ 2013ರಲ್ಲಿ ಅನಿಲ್ ಲಾಡ್ ಆಯ್ಕೆಯಾಗಿದ್ದಾರೆ. 2018ರಲ್ಲಿ ಗಾಲಿ ಸೋಮಶೇಖರ್ ರೆಡ್ಡಿ ಬಿಜೆಪಿಯಿಂದ ಆಯ್ಕೆಯಾಗಿದ್ದರು.
ಬಳ್ಳಾರಿ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದರೂ, ಕಳೆದ ಕೆಲವು ಚುನಾವಣೆಗಳಲ್ಲಿ ಬಜೆಪಿ ಜಯ ಸಾಧಿಸಿದೆ. ಕ್ಷೇತ್ರದಲ್ಲಿ ಸೋಮಶೇಖರ್ ರೆಡ್ಡಿ ವಿರುದ್ಧ ಆಡಳಿತ ವಿರೋಧಿ ಅಲೆ ಕೇಳಿ ಬರುತ್ತಿದೆ. ಕೆಆರ್‌ಪಿಪಿ ನಗರ ಪ್ರದೇಶದ ಮುಸ್ಲಿಂ ಹಾಗೂ ಸ್ಲಂ ಜನರ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಮತಗಳನ್ನು ಸೆಳೆದರೆ ಸೋಮಶೇಖರ್ ರೆಡ್ಡಿಗೆ ಸಹಾಯವಾಗಬಹುದು. ಆದರೆ, ತೋಳ್ಬಲ, ಹಣ ಬಲ ಇಲ್ಲಿ ಯಾರನ್ನಾದರೂ ಗೆಲ್ಲಿಸಬಹುದು. ಯಾರು ಗೆದ್ದು ಬೀಗುತ್ತಾರೆ ಎಂಬುವುದನ್ನು ಕಾಯ್ದು ನೋಡೋಣ