ದಾವಣಗೆರೆ: ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ನಡೆದಿದ್ದ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಕೆ.ಎಸ್ ಈಶ್ವರಪ್ಪ, ಟೀಕಿಸುವ ಭರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿರೋಧಿಸಿ, ಮುಖಂಡ ಹನುಮಂತ ಅವರು `ಪ್ರಾಣ ಬೆದರಿಕೆ ಹಾಗೂ ಪ್ರಚೋದನಕಾರಿ’ ಹೇಳಿಕೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 505 (1) (C), 505 (2), ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿ.ಕೆ ಸುರೇಶ್, ವಿನಯ್ ಕುಲಕರ್ಣಿ ದೇಶ ಇಬ್ಭಾಗ ಮಾಡಬೇಕು ಎಂದು ಹೇಳುತ್ತಿದ್ದಾರೆ. ತಮ್ಮ ಪಕ್ಷದ ಸಂಸದರೇ ಹೇಳಿದಂತೆ ನೀವು ಉತ್ತರ ಭಾರತದ ಅಧ್ಯಕ್ಷರಾ? ಅಥವಾ ದಕ್ಷಿಣ ಭಾರತದ ಅಧ್ಯಕ್ಷರಾ? ಹೇಳಿಕೆ ನೀಡಿರುವ ಇಬ್ಬರೂ ದೇಶದ್ರೋಹಿಗಳು ಈ ಇಬ್ಬರನ್ನೂ ಪಕ್ಷದಿಂದ ಕಿತ್ತು ಬಿಸಾಕಿ ಎಂದು ಒತ್ತಾಯಿಸಿದರಲ್ಲದೇ, ಈ ರೀತಿ ದೇಶದ್ರೋಹ ಹೇಳಿಕೆ ನೀಡುವ, ದೇಶ ದ್ರೋಹ ಕೆಲಸ ಮಾಡುವರನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದು ಹೇಳಿದ್ದರು ಎನ್ನಲಾಗಿದೆ.