ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್ ತಂಡ ಮೊದಲ ಜಯ ಸಾಧಿಸಿದ್ದು, ಆರ್ ಸಿಬಿ ಹಳಿ ತಪ್ಪಿದಂತಾಗಿದೆ.
ರಾಯಲ್ ಚಾಲೆಂಜರ್ಸ್ ತಂಡ ಗುಜರಾತ್ ವಿರುದ್ಧ 19 ರನ್ ಗಳಿಂದ ಸೋಲು ಕಂಡಿದೆ. ಇದಕ್ಕೂ ಮುನ್ನ ಐದು ಪಂದ್ಯಗಳನ್ನಾಡಿದ್ದ ಗುಜರಾತ್ ಒಂದೇ ಒಂದು ಗೆಲುವು ಕಂಡಿರಲಿಲ್ಲ. ಸದ್ಯ ಮೊದಲ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಆರ್ಸಿಬಿ 179 ರನ್ ಗಳಿಸಿ 19 ರನ್ ಗಳಿಂದ ಸೋಲು ಕಂಡಿದೆ.
ಗುಜರಾತ್ ತಂಡಕ್ಕೆ ಆರಂಭಿಕರಿಬ್ಬರು ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಲಾರಾ ವೊಲ್ವಾರ್ಡ್ಟ್ ಹಾಗೂ ನಾಯಕಿ ಬೆತ್ ಮೂನಿ ಮೊದಲ ವಿಕೆಟ್ಗೆ ದಾಖಲೆಯ 140 ರನ್ ಜೊತೆಯಾಟವಾಡಿದರು. ಲಾರಾ 45 ಎಸೆತಗಳಲ್ಲಿ 13 ಬೌಂಡರಿ ಸಹಿತ 76 ರನ್ ಕಲೆಹಾಕಿದರೆ, ಫೋಬೆ ಲಿಚ್ಫೀಲ್ಡ್ ಕೂಡ 18 ರನ್ಗಳ ಕಾಣಿಕೆ ನೀಡಿದರು.
ಮೂನಿ ಕೊನೆಯವರೆಗೂ ಅಜೇಯರಾಗಿ ಉಳಿದು 51 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 85 ರನ್ ಕಲೆಹಾಕಿ ತಂಡದ ಮೊತ್ತ ಹೆಚ್ಚಾಗುವಂತೆ ಮಾಡಿದರು. ಈ ಬೃಹತ್ ಗುರಿ ಬೆನ್ನಟ್ಟಿದ ಆರ್ ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ಸ್ಫೋಟಕ ಆಟಕ್ಕೆ ಮುಂದಾದ ನಾಯಕಿ ಮಂಧಾನ ಈ ಬಾರಿ ಕೇವಲ 24 ರನ್ ಗಳಿಸಿ ಔಟ್ ಆದರು. ಮೇಘನಾರದ್ದು ಎಂದಿನಂತೆ ಆಮೆ ಗತಿಯ ಬ್ಯಾಟಿಂಗ್ 4 ರನ್ ಗೆ ಅಂತ್ಯವಾಯಿತು. ಎಲ್ಲಿಸ್ ಪೆರ್ರಿ ಹಾಗೂ ಸೋಫಿ ಡಿವೈನ್ ಕ್ರಮವಾಗಿ 24 ಹಾಗೂ 23 ರನ್ ಸೇರಿಸಿ ಪೆವಿಲಿಯನ್ ಸೇರಿಕೊಂಡರು.
ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 30 ರನ್ ಕಲೆ ಹಾಕಿದರು. ಏಕಾಂಗಿ ಹೋರಾಟ ನಡೆಸಿದ ಜಾರ್ಜಿಯಾ ವೇರ್ಹ್ಯಾಮ್ 22 ಎಸೆತಗಳಲ್ಲಿ 48 ರನ್ ಕಲೆಹಾಕಿದರೂ ತಂಡ ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾದರು.