ವಿಜಯವಾಡ: ಒಂದೇ ಕುಟುಂಬದ ಐವರು ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆಯೊಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ (Vijayawada) ನಡೆದಿದೆ.
ವೈದ್ಯರೊಬ್ಬರ ಕುಟುಂಬದಲ್ಲಿಯೇ ಈ ರೀತಿ ಕುಟುಂಬಸ್ಥರು ಶವವಾಗಿ ಪತ್ತೆಯಾಗಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ವೈದ್ಯ ಡಾ. ಶ್ರೀನಿವಾಸ್ ಶವವಾಗಿ ಪತ್ತೆಯಾಗಿದ್ದು (Dead body), ಮನೆಯಲ್ಲಿ ಅವರ ಪತ್ನಿ, ಮಕ್ಕಳು, ತಾಯಿಯ ಹೆಣ ಕೂಡ ಪತ್ತೆಯಾಗಿದೆ.
ಡಾ.ಡಿ.ಶ್ರೀನಿವಾಸ್ (40), ಅವರ ಪತ್ನಿ ಉಷಾರಾಣಿ (36), ಅವರ ಮಕ್ಕಳಾದ ಶೈಲಜಾ (9), ಶ್ರೀಹಾನ್ (5), ಮತ್ತು ಶ್ರೀನಿವಾಸ್ ಅವರ ತಾಯಿ ರಮಣಮ್ಮ (65) ಎಂದು ಗುರುತಿಸಲಾಗಿದೆ. ಡಾ. ಶ್ರೀನಿವಾಸ್ ಮನೆಯ ಹೊರಗೆ, ಅಂಗಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲದೇ, ಮನೆಯೊಳಗೆ ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿಯ ಶವಗಳು ರಕ್ತದ ಮಡುವಿನಲ್ಲಿ ಪತ್ತೆಯಾಗಿವೆ. ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶ್ರೀನಿವಾಸ್ ಹೊರಗೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮನೆಯಲ್ಲಿದ್ದ ನಾಲ್ವರನ್ನು ಕೊಲೆ ಮಾಡಿದ್ದಾನೆಯೇ? ಅಥವಾ ಬೇರೆ ಏನಾದರೂ ವಿಷಯವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಪೊಲೀಸರಿಗೆ ರಕ್ತ ಮೆತ್ತಿದ್ದ ಚಾಕುವೊಂದು ಸಿಕ್ಕಿದೆ. ಡಾ. ಶ್ರೀನಿವಾಸ್ ಬರೆದ ಸೂಸೈಡ್ ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಸಹೋದರನಿಗೆ ಕಾರಿನ ಕೀಗಳನ್ನು ನೀಡಿ” ಎಂದು ಬರೆಯಲಾಗಿದೆ. ಶ್ರೀನಿವಾಸ ಆಸ್ಪತ್ರೆ ಹೊಂದಿದ್ದರು. ಆದರೆ, ಹೆಚ್ಚಿನ ಸಾಲ ಮಾಡಿಕೊಂಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.